Index   ವಚನ - 1415    Search  
 
ಪ್ರಾರಬ್ಧ ಪ್ರಯತ್ನಗಳ ತಾರತಮ್ಯವನಿಲ್ಲಿ ಹೇಳಿಹೆ ಕೇಳಿರಯ್ಯಾ: ಪ್ರಯತ್ನದ ಹೆಚ್ಚು ಕುಂದಿನಂತೆ, ಇಂದಾಗಲಿ ಮುಂದಾಗಲಿ ಪ್ರಾರಬ್ಧವು ಫಲಪದವನೀವುದಲ್ಲವೆ? "ಅತ್ಯುತ್ಕಟೈಃ ಪುಣ್ಯಪಾಪೈರಿಹೈವ ಫಲಮಶ್ನುತೇ''|| ಎಂದುದಾಗಿ ಪಿರಿದಪ್ಪ ಪುಣ್ಯಪಾಪಂಗಳು ಇದೆ ಜನ್ಮದಲ್ಲಿಯೆ ಫಲವನೀಯದೆ ಮಾಣವು. ವಿಶ್ವಾಮಿತ್ರನು ಕ್ಷತ್ರಿಯನಾದಡೆಯೂ, ತನ್ನ ತಪಃಪ್ರಭಾವದಿಂದ ಬ್ರಾಹ್ಮಣನಾಗಲಿಲ್ಲವೆ? ಮಾರ್ಕಂಡೇಯನು ಅತ್ಯುತ್ಕಟವಾದ ಶಿವಭಕ್ತಿಯಿಂದ ಚಿರಂಜೀವಿಯಾಗಲಿಲ್ಲವೆ? ರಾವಣ ಕೀಚಕಾದಿಗಳು ಪಾಪಾಧಿಕ್ಯದಿಂದ ಹತಭಾಗ್ಯರಾಗಲಿಲ್ಲವೆ? ಅದು ಕಾರಣ-ತಾನು ಕೈಕೊಂಡ ಕಜ್ಜದಲ್ಲಿ ಪ್ರಯತ್ನವೆ ಪ್ರಾರಬ್ಧವಾಗಿ ಫಲವೀವುದರಿಂದ ಪ್ರಾರಬ್ಧಕ್ಕಿಂತ ಪ್ರಯತ್ನವೇ ಮಿಗಿಲಾಗಿಪ್ಪುದು ಕಾಣಾ, ಕೂಡಲಚೆನ್ನಸಂಗಮದೇವಾ.