Index   ವಚನ - 1417    Search  
 
ಬಟ್ಟಬಯಲೆಲ್ಲ ಗಟ್ಟಿಗೊಂಡಡೆ, ಸ್ವರ್ಗ ಮರ್ತ್ಯ ಪಾತಾಳಕ್ಕೆ ಠಾವೆಲ್ಲಿಯದೊ? ಮೇಘನಿರ್ಮಳಜಲವೆಲ್ಲ ಮುತ್ತಾದಡೆ ಸಪ್ತಸಾಗರಂಗಳಿಗೆ ಉದಕವೆಲ್ಲಿಯದೊ? ಕಷ್ಟಜೀವಿ ಮನುಜರೆಲ್ಲ ನೆಟ್ಟನೆ ಶಿವಜ್ಞಾನಿಗಳಾದಡೆ ಮುಂದೆ ಭವದ ಬಳ್ಳಿ ಬೆಳೆಯಲಿನ್ನೆಲ್ಲಿಯದೊ? `ಗುರುಭಕ್ತಿಂ ಪರಿತ್ಯಜ್ಯ ಸದ್ಯೋsಪಿ ನರಕಂ ವ್ರಜೇತ್' ಇಂತೆಂದುದಾಗಿ, ಕೂಡಲಚೆನ್ನಸಂಗಯ್ಯಾ ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ.