Index   ವಚನ - 1419    Search  
 
ಬಟ್ಟಲೊಳಗಣ ಉದಕವ ತೆಗೆದುಕೊಂಡು ಲಿಂಗದ ಮೇಲೆ ನೀಡಿ, ಜಿಹ್ವೆಯಲ್ಲಿ ಸ್ವೀಕರಿಸಿದಲ್ಲಿಗೆ ಗುರು ಪಾದೋದಕವು. ಮೊದಲು ನಿರೂಪಿಸಿದ ಗುರುಪಾದೋದಕದಿಂದ ಆವ ಪದವಿಯೆಂದಡೆ: ಧರೆಯ ಜನನದ ಅಜ್ಞಾನದ ಭವತ್ವವಳಿದು, ಶಿವಜ್ಞಾನವ ಕರುಣಿಸಿ ಕೊಡುವುದು. ಲಿಂಗಪಾದೋದಕದಿಂದ ಆವ ಪದವಿಯೆಂದಡೆ: ಇಹಲೋಕದ ತನುಭೋಗವಪ್ಪ ಪ್ರಾರಬ್ಧಕರ್ಮವಳಿವುದು, ಶಿವಲೋಕದಲ್ಲಿ `ಇತ್ತಬಾ' ಎಂದೆನಿಸಿಕೊಂಬ ಮನ್ನಣೆಯ ಪದವಿಯಪ್ಪುದು, ಆ ಬಟ್ಟಲಲೆತ್ತಿ ಸಲಿಸಿದ ಜಂಗಮಪಾದೋದಕದಿಂದ ಆವ ಪದವಿ ಎಂದಡೆ: ಇಹಪರಕ್ಕೆ ಎಡೆಯಾಡುವ ಅವಸ್ಥೆಗಳನು, ಪರತತ್ತ್ವವಾದ ಜಂಗಮವನು ಐಕ್ಯಮಾಡಿ ಅಳವಡಿಸಿಕೊಂಡಿಪ್ಪನು. ಇಂತು ಗುರುಪಾದೋದಕ, ಲಿಂಗಪಾದೋದಕ, ಜಂಗಮಪಾದೋದಕ, ತ್ರಿವಿಧ. ಉಳಿದ ಏಳು ಉದಕದೊಳಗೆ ಸ್ಪರ್ಶನೋದಕ ಅವಧಾನೋದಕ ಇವೆರಡು, ಆ ಲಿಂಗದ ಮಸ್ತಕದ ಮೇಲೆ ನೀಡಿ, ಅಂಗುಲಿಗಳ ಜಿಹ್ವೆಯಲ್ಲಿ ಇಟ್ಟುಕೊಂಡಂತಹ ಗುರುಪಾದೋದಕದಲ್ಲಿ ಸಂಬಂಧವು. ಅಪ್ಯಾಯನೋದಕ, ಹಸ್ತೋದಕ ಇವೆರಡು, ಲಿಂಗವನೆತ್ತಿ ಸಲಿಸಿದಂತಹ ಲಿಂಗಪಾದೋದಕದಲ್ಲಿ ಸಂಬಂಧವು. ಪರಿಣಾಮೋದಕ ನಿರ್ನಾಮೋದಕ ಇವೆರಡು, ಬಟ್ಟಲೆತ್ತಿ ಸಲಿಸಿದಂತಹ ಜಂಗಮ ಪಾದೋದಕದಲ್ಲಿ ಸಂಬಂಧವು. ಸತ್ಯೋದಕ ಬಟ್ಟಲ ಖಂಡಿತ ಮಾಡಿದಲ್ಲಿಗೆ ಸಂಬಂಧವು. ಈ ಹತ್ತು ಪಾದೋದಕವು ಮಹತ್ಪಾದದಲ್ಲಿ ಸಂಬಂಧವು. ಧೂಳಪಾದೋದಕ, ದಶವಿಧ ಪಾದೋದಕ ಸಂಬಂಧವು. ಕ್ರಿಯಾಪಾದೋದಕದಲ್ಲಿ ನೋಡಾ ಕೂಡಲಚೆನ್ನಸಂಗಮದೇವಾ.