ಬಲ್ಲಿದ ಬಲ್ಲಿದರೆಂಬವರು ತಮ್ಮಿಂದ
ತಾವಾದ ಸ್ವತಂತ್ರಶೀಲರೆ? ಅಲ್ಲ.
ಬ್ರಹ್ಮ ಬಲ್ಲಿದನೆಂದಡೆ, ಶಿರ ಹೋಗಲದೇನು?
ಹರಿ ಬಲ್ಲಿದನೆಂದಡೆ, ಹಲವು ಭವಕ್ಕೆ ಬರಲದೇನು?
ಅಂಧಕಾಸುವ ಬಲ್ಲಿದನೆಂದಡೆ
ಹರನ ಅಂಗಾಲ ಕೆಳಗೆ ಇರಲೇನು?
ದಕ್ಷ ಬಲ್ಲಿದನೆಂದಡೆ, ಹೋಮಕ್ಕೆ ಗುರಿಯಾಗಲದೇನು?
ಕೋಪಾಗ್ನಿರುದ್ರನೆಂಬ ಜಮದಗ್ನಿ ಬಲ್ಲಿದನೆಂದಡೆ
ಆತನ ತಲೆಯನರಿಯಲದೇನು?
ಪರಶುರಾಮ ಬಲ್ಲಿದನೆಂದಡೆ
ತನ್ನ ಬಿಲ್ಲ ಬಿಟ್ಟು ಹೋಗಲದೇನು?
ಸಹಸ್ರಾರ್ಜುನ ಬಲ್ಲಿದನೆಂದಡೆ
ತೋಳು ತುಂಡಿಸಲದೇನು?
ಅಂಬುಧಿ ಬಲ್ಲಿತ್ತೆಂದಡೆ,
ಅಪೋಶನಕ್ಕೊಳಗಾಗಲದೇನು?
ಅಗಸ್ತ್ಯ ಬಲ್ಲಿದನೆಂದಡೆ ಅರಣ್ಯದೊಳಗೆ
ತಪವ ಮಾಡಲದೇನು?
ನಳರಾಜ ಬಲ್ಲಿದನೆಂದಡೆ
ತನ್ನ ಸತಿಯನಿಟ್ಟು ಹೋಗಲದೇನು?
ಕೃಷ್ಣ ಬಲ್ಲಿದನೆಂದಡೆ,
ಬೇಡನ ಅಂಬು ತಾಗಲದೇನು?
ರವಿ ಶಶಿಗಳು ಬಲ್ಲಿದರೆಂದಡೆ,
ರಾಹುಕೇತು ಗ್ರಹಿಸಲದೇನು?
ಶ್ರೀರಾಮ ಬಲ್ಲಿದನೆಂದಡೆ,
ತನ್ನ ಸತಿ ಕೋಳುಹೋಗಲದೇನು?
ಪಾಂಡವರು ಬಲ್ಲಿದರೆಂದಡೆ,
ತಮಗೆ ಹಳುವಟ್ಟು ಹೋಗಲದೇನು?
ಹರಿಶ್ಚಂದ್ರ ಬಲ್ಲಿದನೆಂದಡೆ,
ಸ್ಮಶಾನವ ಕಾಯಲದೇನು?
ಹರನೆ ನೀ ಮಾಡಲಿಕೆ ರುದ್ರರು,
ನೀ ಮಾಡಲಿಕೆ ದೇವರ್ಕಳು,
ನೀ ಮಾಡಲಿಕೆ ಬಲ್ಲಿದರು,
ನೀ ಮಾಡಲಿಕೆ ವೀರರು,
ನೀ ಮಾಡಲಿಕೆ ಧೀರರು.
ಅಮೂರ್ತಿ ಮೂರ್ತಿ,
ನಿರಾಕಾರ, ನಿರ್ಮಾಯ.
ಇಂತು ಬಲ್ಲಿದರೆಂಬವರ
ಇನ್ನಾರುವ ಕಾಣೆ ನಿಮ್ಮ ತಪ್ಪಿಸಿ,
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Ballida ballidarembavaru tam'minda
tāvāda svatantraśīlare? Alla.
Brahma ballidanendaḍe, śira hōgaladēnu?
Hari ballidanendaḍe, halavu bhavakke baraladēnu?
Andhakāsuva ballidanendaḍe
harana aṅgāla keḷage iralēnu?
Dakṣa ballidanendaḍe, hōmakke guriyāgaladēnu?
Kōpāgnirudranemba jamadagni ballidanendaḍe
ātana taleyanariyaladēnu?
Paraśurāma ballidanendaḍe
tanna billa biṭṭu hōgaladēnu?
Sahasrārjuna ballidanendaḍe
tōḷu tuṇḍisaladēnu?
Ambudhi ballittendaḍe,
apōśanakkoḷagāgaladēnu?
Agastya ballidanendaḍe araṇyadoḷage
tapava māḍaladēnu?
Naḷarāja ballidanendaḍe
tanna satiyaniṭṭu hōgaladēnu?
Kr̥ṣṇa ballidanendaḍe,
bēḍana ambu tāgaladēnu?
Ravi śaśigaḷu ballidarendaḍe,
rāhukētu grahisaladēnu?
Śrīrāma ballidanendaḍe,
tanna sati kōḷuhōgaladēnu?
Pāṇḍavaru ballidarendaḍe,
tamage haḷuvaṭṭu hōgaladēnu?
Hariścandra ballidanendaḍe,
smaśānava kāyaladēnu?
Harane nī māḍalike rudraru,
nī māḍalike dēvarkaḷu,
nī māḍalike ballidaru,
nī māḍalike vīraru,
Nī māḍalike dhīraru.
Amūrti mūrti,
nirākāra, nirmāya.
Intu ballidarembavara
innāruva kāṇe nim'ma tappisi,
kūḍalacennasaṅgamadēvā.