ಬಸವಣ್ಣನ ಶೃಂಗದಲ್ಲಿ ತುಂಬುರ ನಾರದರು,
ಬಸವಣ್ಣನ ಲಲಾಟದಲ್ಲಿ ವೀರಗಣಂಗಳು,
ಬಸವಣ್ಣನ ನಯನದಲ್ಲಿ ಸೂರ್ಯಚಂದ್ರರು,
ಬಸವಣ್ಣನ ಕರ್ಣದಲ್ಲಿ ಗಂಗೆವಾಳು ಕಸಮರುದ್ರರು,
ಬಸವಣ್ಣನ ನಾಸಿಕದಲ್ಲಿ ವಾಯು,
ಬಸವಣ್ಣನ ದಂತದಲ್ಲಿ ಭೃಂಗೀಶ್ವರದೇವರು,
ಬಸವಣ್ಣನ ಕೊರಳಲ್ಲಿ ಈರೇಳು ಭುವನಂಗಳು,
ಬಸವಣ್ಣನ ಅಂಡದಲ್ಲಿ ಅಷ್ಟಷಷ್ಟಿ ತೀರ್ಥಂಗಳು,
ಬಸವಣ್ಣನ ಬಲದೊಡೆಯಲ್ಲಿ
ಅಜ, ಹರಿ, ಸರಸ್ವತಿ, ಪಂಚನದಿ, ಮಹಾಗಂಗೆ,
ಬಸವಣ್ಣನ ಮಣಿಪಾದದಲ್ಲಿ
ದೇವಲೋಕದ ದೇವಗಣಂಗಳು,
ಬಸವಣ್ಣನ ಕಿರುಗೊಳಗಿನಲ್ಲಿ
ಸಪ್ತಸಮುದ್ರಂಗಳು.
ಈ ಸಪ್ತಸಮುದ್ರಂಗಳೊಳಗಿಹ
ಸಕಲಪ್ರಾಣಿಗಳಿಗೆ ಸಂಕೀರ್ಣತೆಯಾದೀತೆಂದು,
ಬಾಲದಂಡದಲೆತ್ತಿ ತಡಿಗೆ ಸೇರಿಸಿದನು ನಮ್ಮ ಬಸವಣ್ಣನು-
ಇದು ಕಾರಣ, ನಾಗಲೋಕದ ನಾಗಗಣಂಗಳು
ಕೊಂಬುದು ಬಸವಣ್ಣನ ಪ್ರಸಾದ.
ಮರ್ತ್ಯಲೋಕದ ಮಹಾಗಣಂಗಳು
ಕೊಂಬುದು ಬಸವಣ್ಣನ ಪ್ರಸಾದ.
ದೇವಲೋಕದ ದೇವಗಣಂಗಳ
ಕೊಂಬುದು ಬಸವಣ್ಣನ ಪ್ರಸಾದ.
ರುದ್ರಲೋಕದ ರುದ್ರಗಣಂಗಳು
ಕೊಂಬುದು ಬಸವಣ್ಣನ ಪ್ರಸಾದ-
ಇಂತು ನಮ್ಮ ಬಸವಣ್ಣನ ಪ್ರಸಾದವನುಂಡುಟ್ಟು
ಕೊಂಡು ಕೊಟ್ಟು ಅನ್ಯದೈವಂಗಳ
ಹೊಗಳುವ ಕುನ್ನಿಗಳನೇನೆಂಬೆ
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Basavaṇṇana śr̥ṅgadalli tumbura nāradaru,
basavaṇṇana lalāṭadalli vīragaṇaṅgaḷu,
basavaṇṇana nayanadalli sūryacandraru,
basavaṇṇana karṇadalli gaṅgevāḷu kasamarudraru,
basavaṇṇana nāsikadalli vāyu,
basavaṇṇana dantadalli bhr̥ṅgīśvaradēvaru,
basavaṇṇana koraḷalli īrēḷu bhuvanaṅgaḷu,
basavaṇṇana aṇḍadalli aṣṭaṣaṣṭi tīrthaṅgaḷu,
basavaṇṇana baladoḍeyalli
aja, hari, sarasvati, pan̄canadi, mahāgaṅge,
basavaṇṇana maṇipādadalli
dēvalōkada dēvagaṇaṅgaḷu,
basavaṇṇana kirugoḷaginalli
Saptasamudraṅgaḷu.
Ī saptasamudraṅgaḷoḷagiha
sakalaprāṇigaḷige saṅkīrṇateyādītendu,
bāladaṇḍadaletti taḍige sērisidanu nam'ma basavaṇṇanu-
idu kāraṇa, nāgalōkada nāgagaṇaṅgaḷu
kombudu basavaṇṇana prasāda.
Martyalōkada mahāgaṇaṅgaḷu
kombudu basavaṇṇana prasāda.
Dēvalōkada dēvagaṇaṅgaḷa
kombudu basavaṇṇana prasāda.
Rudralōkada rudragaṇaṅgaḷu
kombudu basavaṇṇana prasāda-
Intu nam'ma basavaṇṇana prasādavanuṇḍuṭṭu
koṇḍu koṭṭu an'yadaivaṅgaḷa
hogaḷuva kunnigaḷanēnembe
kūḍalacennasaṅgamadēvā.