ಬಸವೇಶ್ವರದೇವರು ತೃಣಪುರುಷನ ಮಾಡಿ
`ಮೀಮಾಂಸಕಂಗೆ ಉತ್ತರವ ಕೊಡು ಹೋಗು' ಎನಲು
ಆ ತೃಣ ಪುರುಷನು ಮಹಾಪ್ರಸಾದವೆಂದು ಕೈಕೊಂಡು,
ಮೀಮಾಂಸಕಂಗೆ ಉತ್ತರವ ಕೊಟ್ಟು
ಶಿವವಿರಹಿತವಾದ ಕಾಳ್ಪುರಾಣವೆಲ್ಲವ
ಬಯಲು ಮಾಡಿ ನುಡಿಯಲು
ಆತಂಗೆ ಶಿವಜ್ಞಾನ ತಲೆದೋರಿ,
ಆ ಬಸವೇಶಂಗೆ ವಂದನಂಗೈದು
ಉಪದೇಶವ ಮಾಡಬೇಕೆನಲು,
ಆತಂಗೆ ವೀರಶೈವದೀಕ್ಷೆಯ ಮಾಡಿ,
ಷಟ್ಸ್ಥಲಮಾರ್ಗ ಕ್ರೀಯ ನಿರೂಪಿಸಿ ತಿಳುಹಲು,
`ಎಲೆ ಬಸವೇಶ್ವರಾ ಜಂಗಮದ
ಪಾದತೀರ್ಥಪ್ರಸಾದವ
ಲಿಂಗಕ್ಕೆ ಕೊಟ್ಟುಕೊಳಬಹುದೆ’? ಎಂದು ಕೇಳಲು,
ಕೇಳೈ ಮೀಮಾಂಸಕಾ, ಪೂರ್ವದಲ್ಲಿ ಪರಮೇಶ್ವರನು
ಸಮಸ್ತ ದೇವತೆಗಳು ಒಡ್ಡೋಲಗದಲ್ಲಿರಲು
ಸೂತ್ರಿಕನೆಂಬ ಶೈವಾಚಾರ್ಯನು
“ಎಲೆ ಪರಮೇಶ್ವರಾ ಜಂಗಮದ
ಪಾದತೀರ್ಥಪ್ರಸಾದವ
ಲಿಂಗಕ್ಕೆ ಕೊಡಬಹುದೆ?'' ಎನಲು,
‘ಎಲೆ ಸೂತ್ರಿಕನೆ ಕೇಳು, ನಾನೆಂದಡೆಯೂ
ಜಂಗಮವೆಂದಡೆಯೂ ಬೇರಿಲ್ಲ.
ಅದು ಕಾರಣ ಜಂಗಮವೆ ಅಧಿಕ.
ನೀನಾ ಜಂಗಮಲಿಂಗದ ಪಾದತೀರ್ಥಪ್ರಸಾದವ
ಲಿಂಗಕ್ಕೆ ಕೊಡಬಾರದೆಂದು ನಿಂದಿಸಿ ನುಡಿದ
ವಾಗ್ದೋಷಕ್ಕೆ ಮರ್ತ್ಯಕ್ಕೆ ಹೋಗಿ
ಹೊಲೆಯನ ಮನೆಯ ಸೂಕರನ ಬಸುರಲ್ಲಿ ಹುಟ್ಟಿ
ಹದಿನೆಂಟು ಜಾತಿಯ ಅಶುದ್ಧವನು
ನಾಲಗೆಯಲಿ ಭುಂಜಿಸಿ
ನರಕಜೀವಿಯಾಗಿರು, ಎಂದುದೆ ಸಾಕ್ಷಿ.
ಇದನರಿದು ಮತ್ತೆ ಜಂಗಮದ
ಪಾದತೀರ್ಥಪ್ರಸಾದವ
ಲಿಂಗಕ್ಕೆ ಕೊಟ್ಟು ಕೊಳಲಾಗದೆಂಬ
ಪಂಚಮಹಾಪಾತಕರ ಮಾತ ಕೇಳಲಾಗದು.
ಅದೆಂತೆಂದಡೆ: ವೀರಾಗಮದಲ್ಲಿ,
“ಜಂಗಸ್ಯ ಅಹಂ ಪ್ರಾಣೋ ಮಮ ಪ್ರಾಣೋ ಹಿ ಜಂಗಮಃ|
ಜಂಗಮೇನ ತ್ವಹಂ ಪೂಜ್ಯೋ ಮಮ ಪೂಜ್ಯೋ ಹಿ ಜಂಗಮಃ||
ಪರಸ್ಪರಮಭೇದತ್ವಾಜ್ಜಂಗಮಸ್ಯ ಮಮಾಪಿ ಚ|
ಪಾದೋದಕಪ್ರಸಾದಾಭ್ಯಾಂ ವಿನಾ ತೃಪ್ತಿರ್ನ ಜಾಯತೇ “||
ಇಂತೆಂಬ ಶಿವನ ವಾಕ್ಯವನರಿದು,
ಜಂಗಮದ ಪಾದತೀರ್ಥವ ಲಿಂಗಕ್ಕೆ ಮಜ್ಜನಕ್ಕೆರೆದು
ಪ್ರಸಾದವ ಲಿಂಗಕ್ಕೆ ನೈವೇದ್ಯವ ಸಮರ್ಪಿಸಿ
ಭೋಗಿಸುವಾತನೆ ಸದ್ಭಕ್ತ, ಆತನೆ ಮಾಹೇಶ್ವರ,
ಆತನೆ ಪ್ರಸಾದಿ, ಆತನೆ ಪ್ರಾಣಲಿಂಗಿ,
ಆತನೆ ಶರಣ, ಆತನೆ ಐಕ್ಯನು.
ಇಂತಪ್ಪ ಷಟ್ ಸ್ಥಲಬ್ರಹ್ಮಿಗೆ ನಮೋ ನಮೋ ಎಂಬೆ.
ಇಂತಲ್ಲದೆ ಜಂಗಮದ ಪಾದತೀರ್ಥಪ್ರಸಾದರಹಿತನಾಗಿ
ಆವನಾನೊಬ್ಬನು ತನ್ನ ಇಷ್ಟಲಿಂಗಕ್ಕೆ ಅರ್ಷವಿಧಾರ್ಚನೆ
ಷೋಡಶೋಪಚಾರಕ್ರೀಯಿಂದ ಪೂಜೆಯ ಮಾಡುವಲ್ಲಿ
ಅವನು ಶುದ್ಧಶೈವನು, ಅವನಿಗೆ ಮುಕ್ತಿಯಿಲ್ಲ ಕಾಣಾ
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Basavēśvaradēvaru tr̥ṇapuruṣana māḍi
`mīmānsakaṅge uttarava koḍu hōgu' enalu
ā tr̥ṇa puruṣanu mahāprasādavendu kaikoṇḍu,
mīmānsakaṅge uttarava koṭṭu
śivavirahitavāda kāḷpurāṇavellava
bayalu māḍi nuḍiyalu
ātaṅge śivajñāna taledōri,
ā basavēśaṅge vandanaṅgaidu
upadēśava māḍabēkenalu,
ātaṅge vīraśaivadīkṣeya māḍi,
ṣaṭsthalamārga krīya nirūpisi tiḷuhalu,
`ele basavēśvarā jaṅgamada
pādatīrthaprasādava
liṅgakke koṭṭukoḷabahude’? Endu kēḷalu,
Kēḷai mīmānsakā, pūrvadalli paramēśvaranu
samasta dēvategaḷu oḍḍōlagadalliralu
sūtrikanemba śaivācāryanu
“ele paramēśvarā jaṅgamada
pādatīrthaprasādava
liṅgakke koḍabahude?'' Enalu,
‘ele sūtrikane kēḷu, nānendaḍeyū
jaṅgamavendaḍeyū bērilla.
Adu kāraṇa jaṅgamave adhika.
Nīnā jaṅgamaliṅgada pādatīrthaprasādava
liṅgakke koḍabāradendu nindisi nuḍida
vāgdōṣakke martyakke hōgi
holeyana maneya sūkarana basuralli huṭṭi
hadineṇṭu jātiya aśud'dhavanu
nālageyali bhun̄jisi
narakajīviyāgiru, endude sākṣi.
Idanaridu matte jaṅgamada
pādatīrthaprasādava
liṅgakke koṭṭu koḷalāgademba
pan̄camahāpātakara māta kēḷalāgadu.
Adentendaḍe: Vīrāgamadalli,
“jaṅgasya ahaṁ prāṇō mama prāṇō hi jaṅgamaḥ|
jaṅgamēna tvahaṁ pūjyō mama pūjyō hi jaṅgamaḥ||
parasparamabhēdatvājjaṅgamasya mamāpi ca|
pādōdakaprasādābhyāṁ vinā tr̥ptirna jāyatē “||
intemba śivana vākyavanaridu,
jaṅgamada pādatīrthava liṅgakke majjanakkeredu
prasādava liṅgakke naivēdyava samarpisi
bhōgisuvātane sadbhakta, ātane māhēśvara,
Ātane prasādi, ātane prāṇaliṅgi,
ātane śaraṇa, ātane aikyanu.
Intappa ṣaṭ sthalabrahmige namō namō embe.
Intallade jaṅgamada pādatīrthaprasādarahitanāgi
āvanānobbanu tanna iṣṭaliṅgakke arṣavidhārcane
ṣōḍaśōpacārakrīyinda pūjeya māḍuvalli
avanu śud'dhaśaivanu, avanige muktiyilla kāṇā
kūḍalacennasaṅgamadēvā.