Index   ವಚನ - 1432    Search  
 
ಬೆಲ್ಲದ ನೀರೆರೆದಡೇನು, ಬೇವು ಸಿಹಿಯಪ್ಪುದೆ? ಕತ್ತುರಿಯ ಲೇಪನವಿತ್ತಡೇನು, ನೀರುಳ್ಳೆಯ ದುರ್ಗಂಧ ದೂರಪ್ಪುದೆ? ಕಸುಗಾಯ ಹಿಸುಕಿದಡೇನು, ಹಣ್ಣಿಗೆ ಹವಣಪ್ಪುದೆ? ಕಿರಿಯ ಮನದ ಮಾನವಂಗೆ ಬಹಿರಂಗದ ಬರಿಯ ಸಂಸ್ಕಾರವಾದಡೇನು, ಭವಿಯಾಗಿಪ್ಪನಲ್ಲದೆ ಭಕ್ತನಪ್ಪನೆ, ಕೂಡಲಚೆನ್ನಸಂಗಮದೇವಾ ಪೂರ್ವಗುಣವಳಿದು ಪುನರ್ಜಾತನಾಗದನ್ನಕ್ಕ?