Index   ವಚನ - 1446    Search  
 
ಭಕ್ತ ಜಂಗಮದ ಸಕೀಲಸಂಬಂಧವೆಂತಿಪ್ಪುದೆಂಬುದನಾರು ಬಲ್ಲರಯ್ಯಾ? ಅದು ಉಪಮಾತೀತ! ಭಕ್ತನೊಳಗೆ ಜಂಗಮವಡಗಿದಡೆ, ಭಕ್ತನಾಗಿ ಕ್ರಿಯಾನಿಷ್ಪತ್ತಿಯಲ್ಲಿ ಸಮರಸಸುಖಿಯಾಗಿಪ್ಪ ನೋಡಯ್ಯಾ. ಜಂಗಮದೊಳಗೆ ಭಕ್ತನಡಗಿದಡೆ, ಕರ್ತೃಭೃತ್ಯಭಾವವಳಿದು ಸಂಬಂಧ ಸಂಶಯದೋರದೆ, ಅರಿವರತು ಮರಹು ನಷ್ಟವಾಗಿ, ಸ್ವತಂತ್ರ ಶಿವಚಾರಿಯಾಗಿರಬೇಕು ನೋಡಯ್ಯಾ. ಈ ಉಭಯಭಾವಸಂಗದ ಪರಿಣಾಮವ ಕಂಡು ಕೂಡಲಚೆನ್ನಸಂಗಯ್ಯನಲ್ಲಿ ಬಸವಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು.