Index   ವಚನ - 1445    Search  
 
ಭಕ್ತ ಜಂಗಮಕ್ಕೆ, ಲೆತ್ತ ಪಗಡೆ ಚದುರಂಗ ಜೂಜು ಕಳವು ಪಾಪ, ಪರಿಹಾಸ ಸರಸ ವಿನೋದ ಕುತ್ಸಿತ ಕುಟಿಲ ಕುಹಕ ಅಟಮಟ ಸಟೆ ಸಂಕಲ್ಪ ಉದಾಸೀನ ನಿರ್ದಯ ದಾಕ್ಷಿಣ್ಯ ದಾಸಿ ವೇಶಿ ಪರಸತಿ ಪರಧನ ಪರದೈವ ಭವಿಸಂಗ-ಇಷ್ಟುಳ್ಳನ್ನಕ್ಕ, ಅವನು ನಾಯಡಗು ನರಮಾಂಸ ಕ್ರಿಮಿಮಲ ಭುಂಜಕನು. ಸುರಾಪಾನಸೇವಕನಪ್ಪನಲ್ಲದೆ, ಭಕ್ತನಲ್ಲ, ಜಂಗಮನಲ್ಲ. ಅದೆಂತೆಂದಡೆ: "ಅಕ್ಷದ್ಯೂತವಿನೋದಶ್ಚ ನೃತ್ಯಗೀತೇಷು ಮೋಹನಮ್| ಅಪಶಬ್ದಪ್ರಯೋಗಶ್ಚ ಜ್ಞಾನಹೀನಸ್ಯಕಾರಣಮ್|| ತಸ್ಕರಂ ಪಾರದಾರಂ ಚ ಅನ್ಯದೈವಮುಪಾಸಕಮ್| ಅನೃತಂ ನಿಂದಕಶ್ಚೈವ ತಸ್ತ್ಯತೇ ಸ್ಯುಶ್ಚಾಂಡಲವಂಶಜಾ:"|| ಎಂದುದಾಗಿ ಈತನು ಗುಣಾವಗುಣವನೊಡಗೂಡಿಕೊಂಡು ನಡೆದಡೆ ಭಕ್ತ ಜಂಗಮನಲ್ಲ ಕಾಣಾ ಕೂಡಲಚೆನ್ನಸಂಗಮದೇವಾ.