Index   ವಚನ - 1456    Search  
 
ಭಕ್ತರಲ್ಲಿ ಬಣ್ಣವನರಸುವಾತನೆ ಆಚಾರದ್ರೋಹಿ. ಜಂಗಮದಲ್ಲಿ ಜಾತಿಯನರಸುವಾತನೆ ಗುರುದ್ರೋಹಿ. ಪಾದೋದಕದಲ್ಲಿ ಸೂತಕವ ಪಿಡಿವಾತನೆ ಲಿಂಗದ್ರೋಹಿ. ಪ್ರಸಾದದಲ್ಲಿ ರುಚಿಯನರಸುವಾತನೆ ಜಂಗಮದ್ರೋಹಿ. ಇಂತೀ ಚತುರ್ವಿಧದೊಳಗೆ ಸನ್ನಿಹಿತನಾದಾತನೆ ಭಕ್ತ, ಇಂತೀ ಚತುರ್ವಿಧದೊಳಗೆ ಕಲಿಯಾದಾತನೆ ಮಾಹೇಶ್ವರ, ಇಂತೀ ಚತುರ್ವಿಧದೊಳಗೆ ಅವಧಾನಿಯಾದಾತನೆ ಪ್ರಸಾದಿ, ಇಂತೀ ಚತುರ್ವಿಧದೊಳಗೆ ತದ್ಗತನಾದಾತನೆ ಪ್ರಾಣಲಿಂಗಿ, ಇಂತೀ ಚತುರ್ವಿಧದೊಳಗೆ ಲವಲವಿಕೆಯುಳ್ಳಾತನೆ ಶರಣ, ಇಂತೀ ಚತುರ್ವಿಧದೊಳಗೆ ಅಡಗಿದಡೆ ಐಕ್ಯ. ಇಂತಿಪ್ಪ ಷಡುಸ್ಥಲವು ಸಾಧ್ಯವಾದಡೆ ಲಿಂಗದೇಹಿ. ಆತ ನಡೆಯಿತ್ತೇ ಬಟ್ಟೆ ಆತ ನುಡಿಯಿತ್ತೇ [ಸಿದ್ಧಾಂತ]. ಕೂಡಲಚೆನ್ನಸಂಗಯ್ಯನಲ್ಲಿ ಆತನೇ ಸರ್ವಾಂಗಲಿಂಗಿ, ಆತನೆ ನಿರ್ದೇಹಿ.