Index   ವಚನ - 1474    Search  
 
ಭವಿಯ ಕಳೆದು ಭಕ್ತನ ಮಾಡಿ, ಅಂಗದ ಮೇಲೆ ಲಿಂಗವ ಧರಿಸಿ, ಗುರುರೂಪನ ಮಾಡಿದ ತನ್ನ ನಿಜಗುರುವಪ್ಪ ಪೂರ್ವಾಚಾರ್ಯನನತಿಗಳೆದು; ಯತಿ ಜತಿಗಳಿವರು ಅತಿಶಯರೆಂದು ಅವರಲ್ಲಿ ಹೊಕ್ಕು, ಪ್ರತಿದೀಕ್ಷೆಯ ಕೊಂಡವಂಗೆ ಗುರುದ್ರೋಹ, ಕೊಟ್ಟವಂಗೆ ಲಿಂಗದ್ರೋಹ. ಇವರಿಬ್ಬರಿಗೂ ಗುರುವಿಲ್ಲ, ಗುರುವಿಲ್ಲವಾಗಿ ಲಿಂಗವಿಲ್ಲ, ಲಿಂಗವಿಲ್ಲವಾಗಿ ಜಂಗಮವಿಲ್ಲ, ಜಂಗಮವಿಲ್ಲವಾಗಿ ಪಾದೋದಕವಿಲ್ಲ, ಪಾದೋದಕವಿಲ್ಲವಾಗಿ ಪ್ರಸಾದವಿಲ್ಲ. ಇಂತೀ ಪಂಚಾಚಾರಕ್ಕೆ ಹೊರಗಾದ ಪತಿತರನು, ಗುರು ಚರ ಪರವೆಂದು ಆರಾಧಿಸಿದವಂಗೆ ಅಘೋರನರಕ ತಪ್ಪದು. ಅದೆಂತೆಂದಡೆ: 'ಯಸ್ತು ಗುರು ಭ್ರಷ್ಟಾರಾರಾಧಿತಃ ತಸ್ಯ ಘೋರನರಕಃ' ಎಂದುದಾಗಿ, ಇವಂದಿರನು ಗುರುಹಿರಿಯರೆಂದು ಸಮಪಂಕ್ತಿಯಲ್ಲಿ ಕೂಡಿ, ಪ್ರಸಾದವ ನೀಡಿ, ಒಡಗೂಡಿಕೊಂಡು ನಡೆಯ ಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ.