ಮುನ್ನಿನವರು ನಡೆದ ಪರಿಯಲ್ಲಿ ಇನ್ನು ನಡೆದರಾಗದೆಂಬ
ಭಿನ್ನ ನುಡಿಯ ಕೇಳಲಾಗದು, ಹೇಳಲಾಗದು.
ಅದೆಂತೆಂದಡೆ:
ಶ್ರೀಗುರು ಕಾರುಣ್ಯವಂ ಪಡೆದು ಜ್ಞಾನಪ್ರತಿಷ್ಠೆಯಂ ತೋರಿದನಾಗಿ
ಅನ್ಯಾಯದ ಗೊಡವೆಯಂ ಬಿಟ್ಟು ಚೆನ್ನಾಗಿ ಶಿವಭಕ್ತರ ಭಾವವ
ಲಾಲಿಸಿ ಕೇಳಿಹೆನೆಂದಡೆ ಹೇಳುವೆ ಕೇಳಿರಣ್ಣಾ:
“ಶಿವಕಾರುಣ್ಯೇನ ಸಾಧ್ಯಾಹಿ ಗಾರುಡಂ ಚಾಷ್ಟಸಿದ್ಧಯಃ|
ಸ್ವರ್ಗಪಾತಾಳಸಾಧ್ಯಾಸ್ತು ಅಂಜನಂ ಘಟಿಕಾಸ್ತಥಾ”||ಎಂದುದಾಗಿ,
ಮಲಗಿದ್ದಲ್ಲಿ ಕನಸ ಕಂಡೆಹೆನೆಂಬರು,
ಆ ಜೀವನು ಈ ಕಾಯ ನಾಶವ ಮಾಡಿ,
ಆ ದ್ವೀಪಕ್ಕೆ ಹೋಗಿ ಕಂಡುಬಂದಿತ್ತೆ?
ಆ ದ್ವೀಪಕ್ಕೆ ಹೋದವು ಈ ಕಾಲೆ?
ಆ ದ್ವೀಪಕ್ಕೆ ಹೋದವು ಈ ಕಣ್ಣೆ?
ಅದು ಹುಸಿ, ದಿಟವೆಂದಡೆ:
ಆ ದ್ವೀಪ ತನ್ನ ಹೃದಯಕಮಲ ಮಧ್ಯದಲುಂಟು,
ಮತ್ತು ಸರ್ವಜಗವುಂಟು.
ಅದೆಂತೆಂದಡೆ:
ನಿದ್ರೆಗೈದಲ್ಲಿ ಕಣ್ಣಿನ ಜ್ಯೋತಿ,
ಹೃದಯಕಮಲ ಮಧ್ಯಕ್ಕಿಳಿದಲ್ಲಿ,
ಜ್ಯೋತಿ ಮನ ಒಂದಾಯಿತ್ತು.
ಒಂದಾದಲ್ಲಿ ಶಿವನುಂಟು.
ಆ ಶಿವನ ಹೃದಯದಲ್ಲಿ ಸಕಲ
ಭುವನಾದಿ ಭುವನಂಗಳೆಲ್ಲ ಉಂಟು,
ಅಲ್ಲಿ ಈ ವಾಯು ತಿರುಗುತ್ತಿದ್ದುದು,
ಅಲ್ಲಿ ಕಂಡುದ ಕನಸೆಂದೆಂಬರು.
ತಲೆಯೊಳಗಣ ಸಹಸ್ರದಳಕಮಲ
ಮಧ್ಯದಲ್ಲಿ ಸಕಲಾತ್ಮನು ಸುಖದಿಂದಿರುತ್ತಿಹನು.
ಅದೆಂತೆಂದಡೆ:
ಅಂತಹ ಆತ್ಮನಿಲ್ಲದಿರ್ದಡೆ
ನೀರಬೊಬ್ಬುಳಿಕೆಯ ಕಣ್ಣು ಕಾಣಬಲ್ಲುದೆ?
ಅಂತಹ ಆತ್ಮನಿಲ್ಲದಿರ್ದಡೆ ತೊಗಲ ಛಿದ್ರದ ಕಿವಿಗಳು ಕೇಳಬಲ್ಲುವೆ?
ಅಂತಹ ಆತ್ಮನಿಲ್ಲದಿರ್ದಡೆ ಹಡಿಕೆ
ಮಲಿನ ಮೂಗು ಪರಿಮಳಂಗಳ ಕೊಳಬಲ್ಲುದೆ?
ಅಂತಹ ಆತ್ಮನಿಲ್ಲದಿರ್ದಡೆ ಮತಿಯು ಮನದೊಳಗಿರಬಲ್ಲುದೆ?
ಅದು ಹುಸಿ ಎಂದಡೆ, ಅಂಗುಷ್ಟದೊಳಗೆ ವಿಷವುಂಟು,
ನಾಭಿಯಲ್ಲಿ ಅಗ್ನಿಯುಂಟು, ಕಂಕುಳಲ್ಲಿ ನಗೆಯುಂಟು,
ಕಂಗಳಲ್ಲಿ ದುಃಖವುಂಟು; ಹುಬ್ಬಿನಲ್ಲಿ ಅಮೃತವುಂಟು,
ಕೋಪವೆಂಬಾ ಕಿಚ್ಚು ಕೆದರಿ ಅಂಗುಷ್ಟದ ಮೇಲೆ ಬೀಳಲಿಕೆ,
ಆ ವಿಷವು ಭುಗಿಲೆಂದೆದ್ದು ಸರ್ವಾಂಗಮಂ ಸುಡುತ್ತ ಬಪ್ಪಲ್ಲಿ
ಜ್ಞಾನವೆಂಬ ಜ್ಯೋತಿ ಹೋಗಿ ತಲೆಯೊಳಡಗಿತ್ತು.
ಅಂತಹ ಕೋಪವೆಂಬ ಹೊಲೆಯು ಶತಸಹಸ್ರ
ಹೊನ್ನ ಕೊಟ್ಟಡೆ ತಿದ್ದುವುದೆ? ತಿದ್ದದು.
ಹಣೆಯ ಅಮೃತ ಬಂದು ಅಂಗುಷ್ಟದ ವಿಷದ ಮೇಲೆ ಬೀಳಲಿಕೆ
ಪರುಷ ಬಂದು ಲೋಹಮಂ ಮುಟ್ಟಿದಂತಾಯಿತ್ತು.
ಸರ್ವಮಂ ಕೊಂದ ಹಗೆಯಾದಡೆಯೂ ಹೋಹುದು.
ಇಂತಪ್ಪ ಸರ್ವಾಂಗಲಿಂಗಾಂಗಿಗಳು ನಿಮ್ಮ ಶರಣರು.
ಕೂಡಲಚೆನ್ನಸಂಗಮದೇವಾ.