Index   ವಚನ - 1569    Search  
 
ಲಿಂಗದಲ್ಲಿ ಸತ್ಕ್ರಿಯಾಚಾರವ ಮನಸೋಂಕಿ ಆಚರಿಸುವಲ್ಲಿ ಮಾರ್ಗಕ್ರಿಯಾಭ್ಯಾಸಿ. ಆ ಅಭ್ಯಾಸಕ್ರೀ ಬಲಿದು ಲಿಂಗದಲ್ಲಿ ನೆನಹು ನಿಂದು ಲಿಂಗವ ಮನ ನೆಮ್ಮಿ ಆಚರಿಸುವಲ್ಲಿ ಮಾರ್ಗಕ್ರೀ. ಮಾರ್ಗಕ್ರೀ ಬಲಿದು ಮನ ಲಿಂಗನಿಜವಾಗಿ ಆಚರಿಸುವಲ್ಲಿ ಮೀರೀದಕ್ರೀ. ಆ ಮೀರಿದಕ್ರೀ ಬಲಿದು ಸರ್ವಾಚಾರಸಹಿತವಾಗಿ ಮಹಾಘನವನಾಚರಿಸುವಲ್ಲಿ ಮೀರಿದ ಕ್ರಿಯಾನಿಷ್ಪತ್ತಿ. ಈ ಚತುರ್ವಿಧ ಸ್ಥಲವನೊಳಕೊಂಡ ಘನ ಕೂಡಲಚೆನ್ನಸಂಗಯ್ಯನಲ್ಲಿ ಈ ಕಾಯವೇ ಪ್ರಸಾದಕಾಯವಾಗಿತ್ತು.