ವಿಭೂತಿ ವಿಭೂತಿಯೆಂಬ ಮಾತಿಂಗಂಜಲೇಕೋ,
ಅದು ವಿಭೂತಿ ಅಹುದೊ ಅಲ್ಲೊ
ಎಂಬ ಕ್ರಮವನರಿಯಬೇಕಲ್ಲದೆ?
ಕೊಂತವೆಂದರೆ ಕರುಳು ಹರಿವುದೆ ಇರಿಯದನ್ನಕ್ಕ?
ನಿಃಕ್ರಿಯ ನಿಃಕಾಮ್ಯ ನಿರುಪಾಧಿಕದಿಂದ
ಶ್ರೇಷ್ಠಾಚಾರವಿಡಿದು ಚರಿಸುವುದು ವಿಭೂತಿ.
ಅದಕ್ಕಂಜುವುದು, ಬೆಚ್ಚುವುದು, ಅದಕ್ಕೆ ತಪ್ಪಿದಡೆ ತಪ್ಪಿದುದು,
ಅಲ್ಲಿ ಶಿಕ್ಷಿಸಲುಂಟು ಬುದ್ಧಿಗಲಿಸಲುಂಟು.
ಅಂತಲ್ಲದೆ ಕುಮಂತ್ರವನೊಡಲೊಳಗಿಂಬಿಟ್ಟುಕೊಂಡು
ಧನದುಪಾಧಿಕೆಗೆ ಅಹುದನಲ್ಲವ ಮಾಡಿ,
ಕುಚೇಷ್ಟೆವಿಡಿದು ಚರಿಸುವುದು ವಿಭೂತಿಯೆ? ಅಲ್ಲ.
ಅದಕಂಜಲಿಲ್ಲ ಬೆಚ್ಚಲಿಲ್ಲ.
ಅದೇನು ಕಾರಣವೆಂದೆಡೆ-ವಿಭೂತಿಯಲ್ಲಾಗಿ.
ಇಂತೀ ಉಭಯದ ಸಕೀಲವ ಸಜ್ಜನ ಶುದ್ಧಸಾತ್ವಿಕರು ಬಲ್ಲರಲ್ಲದೆ
ಎಲ್ಲರೂ ಬಲ್ಲರೆ ಕೂಡಲಚೆನ್ನಸಂಗನಲ್ಲಿ?
Art
Manuscript
Music
Courtesy:
Transliteration
Vibhūti vibhūtiyemba mātiṅgan̄jalēkō,
adu vibhūti ahudo allo
emba kramavanariyabēkallade?
Kontavendare karuḷu harivude iriyadannakka?
Niḥkriya niḥkāmya nirupādhikadinda
śrēṣṭhācāraviḍidu carisuvudu vibhūti.
Adakkan̄juvudu, beccuvudu, adakke tappidaḍe tappidudu,
alli śikṣisaluṇṭu bud'dhigalisaluṇṭu.
Antallade kumantravanoḍaloḷagimbiṭṭukoṇḍu
Dhanadupādhikege ahudanallava māḍi,
kucēṣṭeviḍidu carisuvudu vibhūtiye? Alla.
Adakan̄jalilla beccalilla.
Adēnu kāraṇavendeḍe-vibhūtiyallāgi.
Intī ubhayada sakīlava sajjana śud'dhasātvikaru ballarallade
ellarū ballare kūḍalacennasaṅganalli?