Index   ವಚನ - 1605    Search  
 
ವಿಶ್ವವೆಲ್ಲವೂ ಮಾಯೆಯ ವಶವಾಗಿ, ವಿಶ್ವದೊಳಗಾದ ದ್ರವ್ಯವ ಮಾಯೋಚ್ಛಿಷ್ಟವೆಂದು ಶಿವನೊಲ್ಲ. ಅಂತಪ್ಪ ಮಾಯೆಯ ಗೆಲಿದು, ಮಾಯಾತೀತರಾದ ಭಕ್ತರಿಂದೊದಗಿದ ಪ್ರಸಾದ, ಮಾಯಾತೀತನಾದ ಶಿವಂಗೆ ಮಹಾನೈವೇದ್ಯ, ಪರಮತೃಪ್ತಿ ಎಂಬುದ ನಾ ಬಲ್ಲೆನಯ್ಯಾ. ಅದೆಂತೆಂದಡೆ: "ಮಾಯೋಚ್ಛಿಷ್ಟಂ ಜಗತ್ಸರ್ವಂ ಶುದ್ಧಂ ಪಂಚಾಕ್ಷರೇಣ ಚ| ಅಭಿಮಂತ್ರ್ಯ ತದುಚ್ಛಿಷ್ಟಂ ಪದಾರ್ಥಂ ಭಕ್ತಿಯೇನ್ನರಃ|| ಚರಲಿಂಗೇ ವಿಚಾರೇಣ ಸಮರ್ಪ್ಯ ತದನಂತರಮ್| ಸ್ವಲಿಂಗೇ ಚ ಪ್ರಸಾದಾನ್ನಂ ದತ್ವಾ ಭೋಜನಮಾಚರೇತ್"|| ಎಂದುದಾಗಿ ಚೆನ್ನಯ್ಯನುಂಡು ಮಿಕ್ಕುದ ಚಪ್ಪರಿದು ಸವಿದ, ಚೋಳಿಯಕ್ಕನೊಕ್ಕುದ ಕೊಂಡ. ಇದು ಕಾರಣ- ನಿಮ್ಮ ಪರಮಕಲಾರೂಪವಾದ ಜಂಗಮದ ಪ್ರಸಾದವ ನಿಮಗೆ ದಣಿಯಿತ್ತು ನಿಮ್ಮ ಪ್ರಸಾದವೆಂಬ ಜ್ಯೋತಿ ಎನ್ನಂಗ-ಪ್ರಾಣ-ಭಾವ-ಜ್ಞಾನ ಹಿಂಗದೆ ಬೆಳಗುತ್ತಿದೆ, ನೋಡಾ ಕೂಡಲಚೆನ್ನಸಂಗಮದೇವಾ.