Index   ವಚನ - 1614    Search  
 
ವೇದವನೋದಿ ಹೊನಲಲ್ಲಿ ಹೋದ ದ್ವಿಜರು, ಕೆಟ್ಟ ಕೇಡಿಂಗೆ ಕಡೆಯಿಲ್ಲ. ಅದು ಹೇಗೆಂದಡೆ: ಹೇಮದಾಸೆಗೆ ಒಕ್ಕಲಿಗಂಗೆ ದತ್ತಪುತ್ರನಾಗೆಂದು ಹೇಳಿತ್ತೆ ವೇದವು? ಕೊರಡಿನ ಮೇಲೆ ಕುಳಿತು ತುತ್ತು ಗದ್ಯಾಣವ ನುಂಗಿ ಸೀಮೆಯಹೊರವಡಿಸಿಕೊಳ್ಳೆಂದು ಹೇಳಿತ್ತೆ ವೇದ? ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು ಹೊನ್ನ ಕಪಿಲೆಯ ಕೊಂದು ನರಕಕ್ಕಿಳಿಯ ಹೇಳಿತ್ತೇ ವೇದ? `ಅಹಿಂಸಾ ಪರಮೋ ಧರ್ಮಃ' ಎಂದೋದಿ, ಅಸುರಭೋಜನಕ್ಕೆ ಅಂಗವಿಸಿ ಕರ್ಮವ ಮಾಡಿ ಹೋತ ಕೊಂದು ತಿಂಬುದು ಪಾತಕವಲ್ಲವೆ? `ಪರಮೋ ಧರ್ಮಃ ಹಿರಣ್ಯಗರ್ಭಃ' ಎಂದು ಹೊನ್ನ ಕಪಿಲೆಯಂ ಮಾಡಿ ಕಡಿದು ಹಂಚಿಕೊಂಬುದು ಚಾಂಡಾಲವಲ್ಲವೆ? ಹೊಲೆಯನಂತೆ ಹುಲುವೆಣನ ಸುಟ್ಟು ಹೊರಸಿನ ಮೇಲೆ ಹತವಾದ ಕಳಗ ಹತ್ತಿದ ಹಸುವಿನ ಉತ್ಕ್ರಾಂತಿಯ ಕಾನನದಲ್ಲಿ ಕೂಳು ಭೋಜನವನುಂಡು, ಲೋಕೋಪಚಾರಕ್ಕೆ ಒಳಗಾಗಿ ಪಾಪಕರ್ಮವ ಮಾಡಿ ಸಲ್ಲದೆ ಹೋದರು ಶಿವನಲ್ಲಿಗೆ. ಕೂಡಲಚೆನ್ನಸಂಗಮದೇವ ಶಿವಭಕ್ತಂಗೊಲಿದ ಕಾರಣ ಕಂಚಿಯ ಏಳು ಕೇರಿಯ ಕೈಲಾಸಕ್ಕೊಯ್ದ.