Index   ವಚನ - 1621    Search  
 
ಶಕ್ತಿಯು ಸೂಕ್ಷ್ಮವೆಂದು ಸ್ಥೂಲವೆಂದು ಇತ್ತೆರನಾಗಿರ್ಪುದು. ಸೂಕ್ಷ್ಮಶಕ್ತಿಯ ಪರಿಣಾಮ ದೃಗ್ಗೋಚರವಾಗದು. ಸ್ಥೂಲಶಕ್ತಿಯ ಪರಿಣಾಮ ಪ್ರತ್ಯಕ್ಷವಾಗಿ ಪರಿಣಮಿಸುತಿರ್ಪುದು. ಇವುಗಳಲ್ಲಿ ಸೂಕ್ಷ್ಮಶಕ್ತಿಯ ವಿವರವೆಂತೆಂದಡೆ: ಪ್ರಾಣಿಗಳ ಪುರಸ್ಕಾರದಿಂದ ಪುಣ್ಯವು, ತಿರಸ್ಕಾರದಿಂದ ಪಾಪವು, ಅದೃಷ್ಟವಾಗಿರುವ ಪರಿಯಂತೆ; ಕಾಲವು ಅಮೂರ್ತವಾಗಿ ಪತ್ರಪುಷ್ಪಾದಿ ಮೂರ್ತವಸ್ತುಗಳಿಗೆ ಕಾರಣವಾಗಿರ್ಪಂತೆ, ಮಂತ್ರಪ್ರಯೋಗದಿಂದ ಉರಗನ ಗರಳವು ಹರಣವಾದಂತೆ, ನಿಮಗರ್ಪಿತ ಪ್ರಸಾದಪರಿಣಾಮದ ಸೂಕ್ಷ್ಮಶಕ್ತಿಯಿಂದ ಅನಿಷ್ಟನಿವೃತ್ತಿ ಇಷ್ಟಾರ್ಥಪ್ರಾಪ್ತಿಗಳಾಗುತ್ತಿರ್ಪವಯ್ಯಾ, ಕೂಡಲಚೆನ್ನಸಂಗಮದೇವಾ.