Index   ವಚನ - 1633    Search  
 
ಶರಣು ಶರಣಾರ್ಥಿ ಮಹಾದೇವಾ, ಶರಣು ಶರಣಾರ್ಥಿ ಪರಬ್ರಹ್ಮಸ್ವರೂಪಾ, ಶರಣು ಶರಣಾರ್ಥಿ ನಿರಾಕಾರತತ್ತ್ವವೆ, ನೀವೆ ಗತಿ ನಿಮ್ಮ ಚರಣಕ್ಕೆ ಶರಣಯ್ಯಾ ಪ್ರಭುವೆ. ಸತಿಪತಿಯ ಒಲುಮೆಯ ಮುನಿಸು, ಅತಿಬೇಟವೆಂಬುದು ತಪ್ಪದು ನೋಡಾ. ನಿಮ್ಮ ಶರಣ ಬಸವಣ್ಣನೊಡತಣ ಮುನಿಸು ಎನ್ನ ಮನಕ್ಕೆ ಸಂಶಯ ತೋರದು ನೋಡಾ. ಸಂತೆಯ ನೆರವಿಯಲ್ಲಿ ಅಭಿಮಾನದ ಮಾತ ಮಾರಬಹುದೆ? ಬೀದಿಯಲ್ಲಿ ನಿಂದು ನುಡಿವ ಅನುಭಾವದ ರಚ್ಚೆ ನಗೆಗೆಡೆ ನೋಡಯ್ಯಾ. ಸಂಗನಬಸವಣ್ಣನೊಳಗೆ ನಿಮ್ಮೊಳಗೆ ಭೇದವಿಲ್ಲೆಂಬುದ ನೀವೆ ಅರಿದರಿದು; ಮತ್ತೆ ಬಾರೆವೆಂಬುದುಚಿತವೆ? ಕೂಡಲಚೆನ್ನಸಂಗನ ಶರಣ ಬಸವಣ್ಣನೆ ನಿಮ್ಮ ಪ್ರಾಣವಾಗಿರಲು ಇನ್ನಾರೊಡನೆ ಮುನಿವಿರಿ? ಕೃಪೆ ಮಾಡಾ ಪ್ರಭುವೆ.