Index   ವಚನ - 1635    Search  
 
ಶಿಲೆ ಸ್ಥಾವರ ಮುಂತಾದುವಕ್ಕೆ ಅಪ್ಪುವೆ ಬೀಜ. ಸಕಲ ಚೇತನಾದಿ ರೂಪುಗೊಂಡುವಕ್ಕೆ ವಸ್ತುವೆ ಬೀಜ. ಆ ವಸ್ತು ಜಗದ ಹಿತಾರ್ಥ ಪೀಠಸಂಬಂಧಿಯಾಗಿ 'ಏಕಮೂರ್ತಿಸ್ತ್ರಯೋ ಭಾಗಾಃ' ಆಗಲಾಗಿ ವರ್ತುಳ ಗುರುವಾಗಿ, ಗೋಮುಖ ಜಂಗಮವಾಗಿ ಗೋಳಕಾಕಾರಮೂರ್ತಿ ಲಿಂಗವಾದ ಕಾರಣ, ಲಿಂಗವಾಯಿತ್ತು. ಇಂತೀ ತ್ರಿವಿಧದೊಳಗೆ ಒಂದ ಮೀರಿ ಒಂದ ಕಂಡೆಹೆನೆಂದಡೆ ಬೀಜವಿಲ್ಲದ ಅಂಕುರ, ಅಂಕುರವಿಲ್ಲದ ಬೀಜ. ಅಂಕುರ ಬೀಜವಿರೆ, ಅಪ್ಪು ಪೃಥ್ವಿ ಸಾಕಾರವಿಲ್ಲದಿರೆ ಅಂಕುರಕ್ಕೆ ದೃಷ್ಟವಿಲ್ಲ. ಕೂಡಲಚೆನ್ನಸಂಗಮದೇವರಿರುತಿರಲಿಕ್ಕೆ ಗುರು-ಲಿಂಗ-ಜಂಗಮವೆಂಬ ಭಾವ ಒಡಲಾಯಿತ್ತು.