Index   ವಚನ - 1641    Search  
 
ಶಿವಭಕ್ತಿಯುಳ್ಳವಂಗೆ; ಕಾಮ ಬೇಡ, ಕ್ರೋಧ ಬೇಡ, ಲೋಭ ಬೇಡ; ಮೋಹ ಬೇಡ, ಮದ ಬೇಡ, ಮತ್ಸರ ಬೇಡ. ಶಿವಭಕ್ತಿಯುಳ್ಳವಂಗೆ; ಕಾಮ ಬೇಕು, ಕ್ರೋಧ ಬೇಕು, ಲೋಭ ಬೇಕು, ಮೋಹ ಬೇಕು, ಮದ ಬೇಕು, ಮತ್ಸರ ಬೇಕು. ಬೇಕೆಂಬುದಕ್ಕಾವ ಗುಣ? ಕಾಮ ಬೇಕು ಲಿಂಗದಲ್ಲಿ, ಕ್ರೋಧ ಬೇಕು ಕರಣಂಗಳಲ್ಲಿ, ಲೋಭ ಬೇಕು ಪಾದೋದಕ ಪ್ರಸಾದದಲ್ಲಿ, ಮೋಹ ಬೇಕು ಗುರುಲಿಂಗ ಜಂಗಮದಲ್ಲಿ, ಮದ ಬೇಕು ಶಿವಚಾರದಿಂದ ಘನವಿಲ್ಲವೆಂದು, ಮತ್ಸರ ಬೇಕು ಹೊನ್ನು ಹೆಣ್ಣು ಮಣ್ಣಿನಲ್ಲಿ-ಇಂತೀ ಷಡ್ಗುಣವಿರಬೇಕು. ಬೇಡವೆಂಬುದಕ್ಕಾವುದು ಗುಣ? ಕಾಮ ಬೇಡ ಪರಸ್ತ್ರೀಯರಲ್ಲಿ, ಕ್ರೋಧ ಬೇಡ ಗುರುವಿನಲ್ಲಿ, ಲೋಭ ಬೇಡ ತನು ಮನ ಧನದಲ್ಲಿ, ಮೋಹ ಬೇಡ ಸಂಸಾರದಲ್ಲಿ, ಮದ ಬೇಡ ಶಿವಭಕ್ತರಲ್ಲಿ, ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ- ಇಂತೀ ಷಡ್ಗುಣವನರಿದು ಮೆರೆಯಬಲ್ಲಡೆ ಆತನೇ ಸಹಜ ಸದ್ಭಕ್ತ ಕಾಣಾ ಕೂಡಲಚೆನ್ನಸಂಗಮದೇವಾ.