ಶಿವಲಿಂಗವ ನೋಡುವ ಕಣ್ಣಲ್ಲಿ ಪರಸ್ತ್ರೀಯ
ನೋಡಿದಡೆ ಅಲ್ಲಿ ಲಿಂಗವಿಲ್ಲ.
ಪರಬ್ರಹ್ಮವ ನುಡಿವ ಜಿಹ್ವೆಯಲ್ಲಿ
ಪರಸ್ತ್ರೀಯರ ಅಧರಪಾನವ ಕೊಂಡಡೆ ಪ್ರಸಾದಕ್ಕೆ ದೂರ.
ಘನಲಿಂಗವ ಪೂಜಿಸುವ ಕೈಯಲ್ಲಿ
ಪರಸ್ತ್ರೀಯರ ಕುಚವ ಮುಟ್ಟಿದಡೆ,
ತಾ ಮಾಡಿದ ಪೂಜೆ ನಿಷ್ಫಲ.
ಇದನರಿಯದಿರ್ದಡೆ ಬಳ್ಳದಲ್ಲಿ ಸುರೆಯ ತುಂಬಿ
ಮೇಲೆ ಬೂದಿಯ ಹೂಸಿದಂತಾಯಿತ್ತು ಕಾಣಾ,
ಕೂಡಲಚೆನ್ನಸಂಗಮದೇವಾ.