ಶಿವ ಲೋಕವನಿಚ್ಛಿಸಿ ಶಿವಪೂಜೆಯಂ ಗೈದೊಡೆ
ಮುಂದೆ ಶಿವಲೋಕವನೈದಿ ಅನಂತಕಾಲ
ಶಿವಸುಖವನನುಭವಿಸುತಿರ್ದು,
ಆ ಪುಣ್ಯವು ತೀರಲೊಡನೆ ಮರಳಿ ಧರೆಗಿಳಿದು
ಪೂರ್ವಪುಣ್ಯಸಂಸ್ಕಾರದಿಂದ
ಸತ್ಕುಲದಲ್ಲಿ ಹುಟ್ಟುತಿರ್ಪನು ನೋಡಾ!
"ಅನೇಕಯುಗಸಾಹಸ್ರಂ ಭುಙ್ತೆ ಭೋಗಾನನೇಕಧಾ|
ಪುಣ್ಯೇ ಕ್ಷಯೇ ಕ್ಷೀಣಪಾಪಃ ಕುಲೇ ಮಹತಿ ಜಾಯತೇ"||
ಎಂದುದಾಗಿ,
ಶಿವಕುಲದಲ್ಲಿ ಹುಟ್ಟಿ ಶಿವಸಂಸ್ಕಾರ ಹೊಂದಿ
ಸದ್ಗುರುವಿನಿಂದ ಲಿಂಗಸಾಮರಸ್ಯ ಪಡೆದು
ಅಷ್ಟಾವರಣವೆ ಅಂಗ, ಪಂಚಾಚಾರವೆ ಪ್ರಾಣವಾಗಿ ನಡೆದು
ಕಡೆಗೆ ಚಿರಸುಖಿಯಾಗುತಿರ್ಪನು ನೋಡಾ
ಕೂಡಲಚೆನ್ನಸಂಗಮದೇವಾ.