Index   ವಚನ - 1675    Search  
 
ಶ್ರೀಗುರು ಶಿಷ್ಯಂಗೆ ಮಂತ್ರಮೂರ್ತಿಯ ಕೊಡಬೇಕಾಗಿ, ಸೃಷ್ಟಿಯ ಮೇಗಣ ಕಣಿಯ ತಂದು ಇಷ್ಟಲಿಂಗವ ಮಾಡಿ, ಶಿಷ್ಯನ ತನುವಿನ ಮೇಲೆ ಅದ ಧರಿಸಿ, ಲಿಂಗ ಅವತಳವಾಯಿತ್ತೆಂದು, ಭೂಮಿ ಸಿಂಹಾಸನಗೊಂಡಿತ್ತೆಂದು ಸಮಾಧಿಯ ಹೊಗುವಿರಯ್ಯಾ. ಆ ಲಿಂಗ ಅವತಳವಾದಡೆ ಭೂಮಿ ತಾಳಬಲ್ಲುದೆ? ಗರಡಿಯಲ್ಲಿ ಮುಟ್ಟಿ ಸಾಧನೆಯ ಮಾಡುವಲ್ಲಿ, ಆಳು ಬಿದ್ದಡೆ ಭಂಗವಲ್ಲದೆ ಅಲಗು ಬಿದ್ದಡೆ ಭಂಗವೆ?- ಅಲಗು ತಕ್ಕೊಂಡು ಗರಡಿಯಲಿ ಸಾಧನೆಯ ಮಾಡುವುದು ಕರ್ತವ್ಯ ನೋಡಾ. ಆ ಲಿಂಗ ಹುಸಿಯಾದಡೇನು? ಗುರುಲಿಂಗ ಹುಸಿಯಾದಡೇನು? ಜಂಗಮಲಿಂಗ ಹುಸಿಯಾದಡೇನು? ಪಾದತೀರ್ಥ ಹುಸಿಯೆ? ಪಾದತೀರ್ಥ ಪ್ರಸಾದ ಹುಸಿಯಾದಡೇನು? ವಿಭೂತಿವೀಳ್ಯಕ್ಕೆ ಬಂದ ಗಣಂಗಳು ಹುಸಿಯೆ? ಇಂತೀ ಷಡುಸ್ಥಲವ ತುಚ್ಛಮಾಡಿ, ಗುರೂಪದೇಶವ ಹೀನಮಾಡಿ ಸಮಾಧಿಯ ಹೊಕ್ಕೆನೆಂಬ ಪಾತಕರ ಮುಖವ ನೋಡಲಾಗದು ಕಾಣಾ ಕೂಡಲಚೆನ್ನಸಂಗಮದೇವಾ.