ಶ್ರೀಗುರು ಶಿಷ್ಯನ ಭವಿಪೂರ್ವಾಶ್ರಯವಂ ಕಳೆದು
ಅಂಗದ ಮೇಲೆ ಲಿಂಗಸಾಹಿತ್ಯವ ಮಾಡಿದ ಬಳಿಕ
ಅಂಗವೇ ಲಿಂಗವೆಂದು ಅರ್ಚನೆ
ಪೂಜನೆಯಂ ಮಾಡಿಕೊಂಡಿಹರು,
ಅದು ಲಿಂಗವಲ್ಲ, ಅದೇಕೆ ಅಲ್ಲವೆಂದಡೆ:
ಅಂಗದ ಮೇಲೆ ಅರತು, ಮುಂದೆ
ಜಂಗಮಲಿಂಗವ ತೋರಿತ್ತಾಗಿ,
ಆ ಜಂಗಮವೇ ಲಿಂಗವೆಂದು
ಅರ್ಚನೆ ಪೂಜನೆಯಂ ಮಾಡಿಕೊಂಡಿಹರು.
ಅದು ಜಂಗಮಲಿಂಗವಲ್ಲ, ಅದೇಕೆ ಅಲ್ಲವೆಂದಡೆ:
ಮುಂದೆ ಪ್ರಸಾದಲಿಂಗವೆಂದು ತೋರಿತ್ತಾಗಿ,
ಅದು ಪ್ರಸಾದಲಿಂಗವಲ್ಲ,
ಅದೇಕೆ ಅಲ್ಲವೆಂದಡೆ:
ಅದು .... ಹೋಯಿತ್ತಾಗಿ.
ಇಂತೀ ತ್ರಿವಿಧದ ಮೇಲೆ ಅಂಕುರವಾದ
ಮಹಾಪ್ರಸಾದಿಗಳ ಕೂಡಿ ಬದುಕಿಸಯ್ಯಾ,
ಕೂಡಲಚೆನ್ನಸಂಗಯ್ಯಾ, ನಿಮ್ಮ ಧರ್ಮ.