ಶ್ರೀಗುರು ಶಿಷ್ಯಂಗೆ ಮಂತ್ರಮೂರ್ತಿಯ ಕೊಡಬೇಕಾಗಿ,
ಸೃಷ್ಟಿಯ ಮೇಗಣ ಕಣಿಯ ತಂದು ಇಷ್ಟಲಿಂಗವ ಮಾಡಿ,
ಶಿಷ್ಯನ ತನುವಿನ ಮೇಲೆ ಅದ ಧರಿಸಿ,
ಲಿಂಗ ಅವತಳವಾಯಿತ್ತೆಂದು,
ಭೂಮಿ ಸಿಂಹಾಸನಗೊಂಡಿತ್ತೆಂದು
ಸಮಾಧಿಯ ಹೊಗುವಿರಯ್ಯಾ.
ಆ ಲಿಂಗ ಅವತಳವಾದಡೆ ಭೂಮಿ ತಾಳಬಲ್ಲುದೆ?
ಗರಡಿಯಲ್ಲಿ ಮುಟ್ಟಿ ಸಾಧನೆಯ ಮಾಡುವಲ್ಲಿ,
ಆಳು ಬಿದ್ದಡೆ ಭಂಗವಲ್ಲದೆ ಅಲಗು ಬಿದ್ದಡೆ ಭಂಗವೆ?-
ಅಲಗು ತಕ್ಕೊಂಡು ಗರಡಿಯಲಿ
ಸಾಧನೆಯ ಮಾಡುವುದು ಕರ್ತವ್ಯ ನೋಡಾ.
ಆ ಲಿಂಗ ಹುಸಿಯಾದಡೇನು?
ಗುರುಲಿಂಗ ಹುಸಿಯಾದಡೇನು?
ಜಂಗಮಲಿಂಗ ಹುಸಿಯಾದಡೇನು?
ಪಾದತೀರ್ಥ ಹುಸಿಯೆ?
ಪಾದತೀರ್ಥ ಪ್ರಸಾದ ಹುಸಿಯಾದಡೇನು?
ವಿಭೂತಿವೀಳ್ಯಕ್ಕೆ ಬಂದ ಗಣಂಗಳು ಹುಸಿಯೆ?
ಇಂತೀ ಷಡುಸ್ಥಲವ ತುಚ್ಛಮಾಡಿ,
ಗುರೂಪದೇಶವ ಹೀನಮಾಡಿ
ಸಮಾಧಿಯ ಹೊಕ್ಕೆನೆಂಬ ಪಾತಕರ
ಮುಖವ ನೋಡಲಾಗದು
ಕಾಣಾ ಕೂಡಲಚೆನ್ನಸಂಗಮದೇವಾ.