Index   ವಚನ - 1695    Search  
 
ಸತಿಯರ ನರಮಾಂಸವೆಂಬ ಮಾಂಸದ ಪುತ್ಥಳಿಯ ನಿಚ್ಚನಿಚ್ಚ ಕಡಿದುಕೊಂಡು ತಿಂಬ ನಾಯಿಗಳಿಗೆ ಎಲ್ಲಿಯದೊ ವ್ರತಶೀಲಸಂಬಂಧ? ಅವರ ಅಧರ ಸೇವನೆಯೆ ಮಧುಮಾಂಸ, ಅವರ ಉದರ ಸೇವನೆಯೆ ಸುರೆಮಾಂಸ. ಕಾಮವೆ ಕಬ್ಬಲಿಗ, ಕ್ರೋಧವೆ ಹೊಲೆಯ, ಲೋಭವೆ ಕಳ್ಳ, ಮೋಹವೆ ಬಲೆಗಾರ, ಮದವೆ ಮಾದಿಗ, ಮತ್ಸರವೆ ಸುರಾಪಾನಿ- ಇಂತೀ ಷಡ್ವಿಧ ಭವಿಯ, ತಮ್ಮೆದೆಯೊಳಗೆ ಇಂಬಿಟ್ಟುಕೊಂಡು 'ಭವಿಪಾಕ ಪರಪಾಕ' ಎಂಬ ಪಂಚಮಹಾಪಾತಕರ, ಮೆಚ್ಚುವನೆ ಕೂಡಲಚೆನ್ನಸಂಗಮದೇವ?