Index   ವಚನ - 1738    Search  
 
ಹಸಿವು ತೃಷೆ ವಿಷಯವೆಂಬ ಮರಂಗಳನೆ ಕಂಡು, ಪರಿಣಾಮವೆಂಬ ಕೊಡಲಿಯಲ್ಲಿ ತತ್ತರಿದರಿದು, ಕಾಮ ಕ್ರೋಧ ಲೋಭ ಮೋಹ ಮದಮತ್ಸರಂಗಳ ತರಿದೊಟ್ಟಿದನೊಂದೆಡೆಯಲ್ಲಿ. ಪಂಚೇಂದ್ರಿಯ, ಷಡುವರ್ಗ, ಸಪ್ತಧಾತು, ಅಷ್ಟಮದವೆಂಬ ಬಳ್ಳಿಯ ಸೀಳಿ, ಏಳು ಕಟ್ಟಿನ ಮೋಳಿಗೆಯನೆ ಹೊತ್ತು ನಡೆದನಯ್ಯಾ. ಆಶೆ ಆಮಿಷ ತಾಮಸವೆಂಬ ತುರಗವನೇರಿ ಆತುರದ ತುರವನೆ ಕಳೆದನಯ್ಯಾ. ಈ ಮಹಾಮಹಿಮಂಗೆ, ಜಗದ ಜತ್ತಿಗೆಯ, ಹಾದರಗಿತ್ತಿಯ, ಹದಿನೆಂಟು ಜಾತಿಯ ಮನೆಯಲ್ಲಿ ತೊತ್ತಾಗಿಹ ಶಿವದ್ರೋಹಿಯ ಲಿಂಗವಂತರ ಮನೆಯಲ್ಲಿ ಹೊಗಿಸುವರೆ? ಎಲೆ ಲಿಂಗತಂದೆ, ಜಡವಿಡಿದು ಕೆಟ್ಟೆನಯ್ಯಾ, ಭಕ್ತಿಯ ಕುಲವನರಿಯದೆ. ಎಲೆ ಲಿಂಗದಾಜ್ಞಾಧಾರಕಾ, ಎಲೆ ಲಿಂಗಸನುಮತಾ, ಎಲೆ ಲಿಂಗೈಕಪ್ರತಿಗ್ರಾಹಕಾ. ಕೂಡಲಚೆನ್ನಸಂಗಯ್ಯನಲ್ಲಿ, ಮೋಳಿಗೆಯ ಮಾರಿತಂದೆಗಳ ಶ್ರೀಪಾದಕ್ಕೆ ನಮೋ ನಮೋ, ಜಯಜಯತು.