Index   ವಚನ - 4    Search  
 
ಅಚ್ಚಪ್ರಸಾದವೆಂಬುದೆ ನಿಶ್ಚಲ ನಿರ್ವಯಲಕ್ಕೆ ನಾಮವು. ಅಚಲ ಅದ್ವಯ ಅಭಿನ್ನವೆಂಬುದೆ [ಅಚ್ಚಪ್ರಸಾದ]. ಗುರುಸ್ವಾನುಭಾವದಿಂದರಿದು ನಿಶ್ಚಯವಾದುದೆ ನಿಚ್ಚಪ್ರಸಾದ. ಅಷ್ಟಮೂರ್ತಿಗಳ ಸಮಯವನರಿದುದೆ ಸಮಯಪ್ರಸಾದ. ಏಕಪ್ರಸಾದವೆಂಬುದೆ ಅಂಡಪಿಂಡ ಬ್ರಹ್ಮಾಂಡಗಳಿಗೆ ಏಕರಸಮಯವಾಗಿ ತತ್ವಮಸಿಯಾದಿ ವಾಕ್ಯಂಗಳನರಿತು ಸರ್ವಂ ಖಲ್ವಿದಂ ಬ್ರಹ್ಮವೆಂದು ಅರಿತುಕೊಳ್ಳಬಲ್ಲರೆ ಏಕಮೇವನದ್ವಿತೀಯವೆಂದು ವಾಕ್ಯಂಗಳಿಗೆಡೆಗೊಡದೆ ಏಕಪ್ರಸಾದವ ಕೊಂಡವರು ಬಸವ ಚನ್ನಬಸವ [ಪ್ರಭುದೇವ] ಮುಖ್ಯವಾದ ಅಸಂಖ್ಯಾತ ಗಣಂಗಳು. [ಕೊಂಡವರ ಏಕ] ಪ್ರಸಾದದಿಂದ ಮುಂದಾದವರಿಗೂ ಇದೇ ಪ್ರಸಾದ ಹಿಂದಾದವರಿಗೂ ಇದೇ ಪ್ರಸಾದ ಇಂದಾದವರಿಗೂ ಇದೇ ಪ್ರಸಾದ. ಈ ಪ್ರಸಾದವಲ್ಲದೆ ನಿತ್ಯಾನಿತ್ಯ ಹಸಿವು ತೃಷೆಗೆ ಕೊಂಬುವದು ಪಾದೋದಕ ಪ್ರಸಾದವಲ್ಲ. ನೀರಕೂಳನುಂಡು ಜಲಮಲವೆಂಬುದು ಪಾದೋದಕ ಪ್ರಸಾದವಲ್ಲ. ನಿತ್ಯ ನಿತ್ಯ ತೃಪ್ತಿಯೇ ಪ್ರಸಾದವೆಂಬುವದು ಪರಮಾನಂದವು. ಈ ಭೇದವನರಿದುಕೊಳ್ಳಬಲ್ಲಾತನೆ ಭಕ್ತ, ಕೊಡಬಲ್ಲಾತನೆ ಗುರುವು. ಪಾದೋದಕ ಪ್ರಸಾದವ ಕೊಳ್ಳಬೇಕೆಂಬಾತ ಭಕ್ತನಲ್ಲ, ಬದ್ದಭವಿ. ಉರಿಕೊಂಡ ಕರ್ಪುರವ ಮರಳಿ ಸುಡುವರೆ? ಪರುಷ ಮುಟ್ಟಲು ಲೋಹ ಹೊನ್ನಾದ ಮೇಲೆ ಮರಳಿ ಮರಳಿ ಪರುಷವ ಮುಟ್ಟಿಸುವರೆ? ಜ್ಯೋತಿ ಮುಟ್ಟಿದ ಮನೆಗೆ ಕತ್ತಲುಂಟೆ? ಪಾದೋದಕ ಪ್ರಸಾದ ಸೋಂಕಿದ ಕಾಯ ಪ್ರಸಾದವಲ್ಲದೆ ಪ್ರಸಾದಕ್ಕೆ ಪ್ರಸಾದವುಂಟೆ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ?