Index   ವಚನ - 23    Search  
 
ಗುರು ಹಸ್ತಮಸ್ತಕಸಂಯೋಗ ಲಿಂಗಶರಣನಾದ ಬಳಿಕ ಮಲದೇಹಿ ಮಾಂಸಪಿಂಡ ವಾಯುಪ್ರಾಣಿಯು ಹೋಗಿ ಪ್ರಸಾದಕಾಯ ಮಂತ್ರಪಿಂಡ ಲಿಂಗಪ್ರಾಣಿಯಾಯಿತು. ಇಂತೀ ಸರ್ವಾಂಗಪ್ರಸಾದಮಂತ್ರಮೂರ್ತಿಯಾದ ಶರಣನ ನಿಲವನರಿಯದೆ ವೇಷಧಾರಿಗಳು ನಿಂದಿಸಿ ನುಡಿಯುತಿಹಿರಿ. ನಿಮ್ಮ ಅಂಗದ ಮೇಲೆ ಲಿಂಗ ಸೋಂಕಲು ಲಿಂಗಾಂಗವಾದುದಿಲ್ಲವೆ? ನೀವು ಪ್ರಸಾದಕೊಂಡ ಕಾಯವೆಲ್ಲ ಪ್ರಸಾದಕಾಯ ಆದುದಿಲ್ಲವೆ? ನೀವು ಮಂತ್ರಮೂರ್ತಿ ಆದುದಿಲ್ಲವೆ? ಈ ತ್ರಿವಿಧ ಪೂರ್ವವ ಕಳೆದು ಪುನರ್ಜಾತನ ಮಾಡಿದಾತ ಅವಗೆ ಗುರುವಿಲ್ಲ, ಅವನು ಶಿಲೆಯ ಮಾರಿ ಹೊಟ್ಟೆಹೊರಕೊಂಬುವ ಭೂತದೇಹಿ. ಅವನು ಗುರುವೆಂದು ಪೂಜಿಸುವ ವೇಷಧಾರಿ, ಅವರಿಬ್ಬರಿಗೂ ಪಾದೋದಕ ಪ್ರಸಾದ ವಿಷವಾಗಿ ಹೊಟ್ಟೆ ಹೊರೆದುಕೊಂಬ ಜಂಗಮ ತುತ್ತು ಬುತ್ತಿಯನಾಯ್ದುಕೊಂಡು ತಿಂಬ ಪಿಶಾಚಿ. ಇಂತೀ ಲಿಂಗಾಂಗಿ ಲಿಂಗಪ್ರಾಣಿಯಾದ ಶರಣರ ನಿಂದಿಸುವ ಲಾಂಛನಧಾರಿಗಳಿಗೆ ಶಿವಲಿಂಗ ಸಂಬಂಧವಿಲ್ಲವೆಂದ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.