ಲಿಂಗಾಂಗಿ ಲಿಂಗಪ್ರಾಣಿಗಳು ಪ್ರಸಾದಕಾಯ ಮಂತ್ರಮೂರ್ತಿಗಳು.
ಅವರು ನೋಡಿದುದೆಲ್ಲ ಲಿಂಗದೃಷ್ಟಿ,
ಅವರು ಕೇಳಿದುದೆಲ್ಲ ಲಿಂಗಸ್ತೋತ್ರ.
ಅವರು ಮುಟ್ಟಿದುದೆಲ್ಲ ಲಿಂಗಹಸ್ತ,
ಅವರು ಘ್ರಾಣಿಸುವುದೆಲ್ಲ ಲಿಂಗಘ್ರಾಣ.
ಅವರು ರುಚಿಸುವುದೆಲ್ಲ ಲಿಂಗಜಿಹ್ವೆ.
ಅವರ ಸರ್ವೇಂದ್ರಿಯಮುಖದಲ್ಲಿ ಪರಿಣಮಿಸುವುದು ಲಿಂಗ ತಾನೆ.
ಇಂತು ಶರಣಗಣಂಗಳಿಗೆ ಲಿಂಗಕ್ಕೆ
ಕೊಟ್ಟು ಕೊಡಲಿಲ್ಲವೆಂಬ ಭಂಗಿತರುಗಳಿಗೆ
ಶಿವಲಿಂಗ ಮುನ್ನವಿಲ್ಲವೆಂದ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.