Index   ವಚನ - 32    Search  
 
ಏನೂ ಏನೂ ಇಲ್ಲದೆ ತಾನೆ ತಾನಾಗಿರ್ದ ಭಾನುಕೋಟಿಪ್ರಭೆ ಒಂದಾದ ಪ್ರಸಾದ. ವರ್ಣ ವಸ್ತು ನಾದ ಬಿಂದು ಕಳೆಗಳಿಲ್ಲದಂದು ಸುರಾಳ ನಿರಾಳವಿಲ್ಲದಂದು ಪಿಂಡಾಂಡ ಬ್ರಹ್ಮಾಂಡಂಗಳು ಮೊಳೆದೋರದಂದು ಪಂಚಮೂರ್ತಿಗಳ ನಾಮವಿಲ್ಲದಂದು ಪಂಚಪ್ರಣಮದ ಘೋಷಧ್ವನಿದೋರದಂದು ಮಹಾಪ್ರಸಾದ ಆಕಾಶವೆ ತಾನೆಯಾದ ಚಿತ್ಪ್ರಸಾದದ ಪ್ರಕಾಶವೆ ಅನಂತಕೋಟಿಸೋಮಸೂರ್ಯಪ್ರಭೆಯನೊಳಕೊಂಡಿತ್ತು. ಸಾ-ಕಾರವೆ ಚಿಚ್ಫಕ್ತಿ[ಗೆ] ಆದಿಯಾಗಿ ಅನಂತಕೋಟಿಶಕ್ತಿಗಳಿಗೆ ಆಶ್ರಯಸ್ಥಾನವಾಗಿದ್ದಿತ್ತು. ದ-ಕಾರವೆ ದಶದಿಶಭರಿತಪೂರ್ಣಾಕಾರ ಲಿಂಗವಾಗಿ ಸತ್ತುಚಿತ್ತಾನಂದ ನಿತ್ಯಪರಿಪೂರ್ಣನಾಮವೆಂದುದಾ ಪ್ರಸಾದ ಶಬ್ದ. ಈ ಭೇದವನರಿದು ಕೊಡಬಲ್ಲರೆ ಗುರುಲಿಂಗಜಂಗಮವೆನಬಹುದು. ಈ ಭೇದವನರಿದು ಕೊಳಬಲ್ಲರೆ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆನಬಹುದು. ಇದನರಿಯದೆ ಕೊಟ್ಟ ಜಂಗಮಕ್ಕೆ, ಕೊಂಡ ಭಕ್ತಂಗೆ ರೌರವ ನರಕವೆಂದುದು ನೋಡಾ. ಇದಕ್ಕೆ ಸಾಕ್ಷಿ: 'ಜ್ಞಾನಹೀನಂ ಗುರುಂ ಪ್ರಾಪ್ಯ ಶಿಷ್ಯೋ ಜ್ಞಾನವಿವರ್ಜಿತಃ | ಅಂಧೋಂಧಕರಯುಕ್ತಶ್ಚ ದ್ವಿವಿಧಂ ಪಾತಕಂ ಭವೇತ್ ||' ಎಂದುದಾಗಿ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವು ಶ್ರುತಿ ಸಾಕ್ಷಿಯಾಗಿ ಛೀ ಎನ್ನದೆ ಮಾಣ್ಬನೆ ನಿಮ್ಮ ಶರಣನು