Index   ವಚನ - 39    Search  
 
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬ ಷಡ್ವಿಧಮೂರ್ತಿಗಳಿಗೂ ಷಡ್ವಿಧಲಿಂಗವ ಕಂಡೆನಯ್ಯ ಅದು ಹೇಗೆಂದಡೆ: ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ, ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ, ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ. ಈ ಷಡ್ವಿಧಲಿಂಗಕೂ ಷಡ್ವಿಧಶಕ್ತಿಯ ಕಂಡೆನಯ್ಯ ಅದು ಹೇಗೆಂದಡೆ: ಆಚಾರಲಿಂಗಕ್ಕೆ ಕ್ರಿಯಾಶಕ್ತಿ, ಗುರುಲಿಂಗಕ್ಕೆ ಜ್ಞಾನಶಕ್ತಿ, ಶಿವಲಿಂಗಕ್ಕೆ ಇಚ್ಚಾಶಕ್ತಿ, ಜಂಗಮಲಿಂಗಕ್ಕೆ ಆದಿಶಕ್ತಿ, ಪ್ರಸಾದಲಿಂಗಕ್ಕೆ ಪರಾಶಕ್ತಿ, ಮಹಾಲಿಂಗಕ್ಕೆ ಚಿಚ್ಚಕ್ತಿ. ಈ ಷಡ್ವಿಧಶಕ್ತಿಯರಿಗೂ ಷಡ್ವಿಧಭಕ್ತಿಯ ಕಂಡೆನಯ್ಯ. ಅದು ಹೇಗೆಂದಡೆ: ಕ್ರಿಯಾಶಕ್ತಿಗೆ ಸದ್ಭಕ್ತಿ, ಜ್ಞಾನಶಕ್ತಿಗೆ ನೈಷ್ಠಿಕಭಕ್ತಿ, ಇಚ್ಚಾಶಕ್ತಿಗೆ ಸಾವಧಾನ ಭಕ್ತಿ, ಆದಿಶಕ್ತಿಗೆ ಅನುಭಾವಭಕ್ತಿ, ಪರಾಶಕ್ತಿಗೆ ಸಮರತಿ(ಆನಂದ)ಭಕ್ತಿ, ಚಿತ್ ಶಕ್ತಿಗೆ ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೆ ಷಡ್ವಿಧಹಸ್ತವ ಕಂಡೆನಯ್ಯ. ಅದು ಹೇಗೆಂದಡೆ: ಸದ್ಭಕ್ತಿಗೆ ಸುಚಿತ್ತಹಸ್ತ, ನೈಷ್ಠಿಕಭಕ್ತಿಗೆ ಸುಬುದ್ಧಿಹಸ್ತ, ಸಾವಧಾನಭಕ್ತಿಗೆ ನಿರಹಂಕಾರಹಸ್ತ, ಅನುಭಾವ ಭಕ್ತಿಗೆ ಸುಮನಹಸ್ತ, ಸಮರತಿಭಕ್ತಿಗೆ ಸುಜ್ಞಾನಹಸ್ತ, ಸಮರಸಭಕ್ತಿಗೆ ನಿರ್ಭಾವಹಸ್ತ. ಈ ಷಡ್ವಿಧ ಹಸ್ತಂಗಳಿಗೂ ಷಡ್ವಿಧಕಲೆಗಳ ಕಂಡೆನಯ್ಯ. ಅದು ಹೇಗೆಂದಡೆ: ಸುಚಿತ್ತಹಸ್ತಕ್ಕೆ ನಿವೃತ್ತಿಕಲೆ, ಸುಬುದ್ಧಿ ಹಸ್ತಕ್ಕೆ ಪ್ರತಿಷ್ಠಾಕಲೆ, ನಿರಹಂಕಾರಹಸ್ತಕ್ಕೆ ವಿದ್ಯಾಕಲೆ, ಸುಮನಹಸ್ತಕ್ಕೆ ಶಾಂತಿಕಲೆ, ಸುಜ್ಞಾನಹಸ್ತಕ್ಕೆ ಶಾಂತ್ಯತೀತಕಲೆ, ನಿರ್ಭಾವಹಸ್ತಕ್ಕೆ ಶಾಂತ್ಯತೀತೋತ್ತರಕಲೆ, ಈ ಷಡ್ವಿಧಕಲೆಗಳಿಗೂ ಷಡ್ವಿಧ[ಜ್ಞಾನ]ಸಂಬಂಧವ ಕಂಡೆನಯ್ಯ. ಅದು ಹೇಗೆಂದಡೆ: ನಿವೃತ್ತಿಕಲೆಗೆ ಶುದ್ಧಜ್ಞಾನವೇ ಸಂಬಂಧ, ಪ್ರತಿಷ್ಠಾಕಲೆಗೆ ಬದ್ಧಜ್ಞಾನವೇ ಸಂಬಂಧ, ವಿದ್ಯಾಕಲೆಗೆ ನಿರ್ಮಲಜ್ಞಾನವೇ ಸಂಬಂಧ, ಶಾಂತಿಕಲೆಗೆ ಮನಜ್ಞಾನವೇ ಸಂಬಂಧ, ಶಾಂತ್ಯತೀತಕಲೆಗೆ ಸುಜ್ಞಾನವೇ ಸಂಬಂಧ, ಶಾಂತ್ಯತೀತೋತ್ತರಕಲೆಗೆ ಪರಮಜ್ಞಾನವೇ ಸಂಬಂಧ. ಈ ಷಡ್ವಿಧಸಂಬಂಧಗಳಿಂದತ್ತ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.