Index   ವಚನ - 85    Search  
 
ಓಂ ನಮೋ ಶಿವಾಯವೆಂಬ ಮಂತ್ರವು ನೆನಹಿಂಗೆ ಬಾರದಂದು. ತಾನುತಾನೆಂಬುದು ಭಾವಕೆ ತೋರದಂದು. ಎಂತಿರ್ದ ಬ್ರಹ್ಮವು ತಾನೇ ನೋಡಾ ! ಆ ಬ್ರಹ್ಮದ ಚಿದ್ವಿಲಾಸದಿಂದ ಚಿದಾತ್ಮನಾದ. ಆ ಚಿದಾತ್ಮನ ಭಾವದಿಂದ ಜ್ಞಾನಾತ್ಮನಾದ. ಆ ಜ್ಞಾನಾತ್ಮನ ಭಾವದಿಂದ ಅಧ್ಯಾತ್ಮನಾದ. ಆ ಅಧ್ಯಾತ್ಮನ ಭಾವದಿಂದ ನಿರ್ಮಲಾತ್ಮನಾದ. ಆ ನಿರ್ಮಲಾತ್ಮನ ಭಾವದಿಂದ ಶುದ್ಧಾತ್ಮನಾದ. ಆ ಶುದ್ಧಾತ್ಮನ ಭಾವದಿಂದ ಬದ್ಧಾತ್ಮನಾದ. ಆ ಬದ್ಧಾತ್ಮನ ಭಾವಕೆ ಭಕ್ತನಾದ. ಆ ಶುದ್ಧಾತ್ಮನ ಭಾವಕೆ ಮಹೇಶ್ವರನಾದ. ಆ ನಿರ್ಮಲಾತ್ಮನ ಭಾವಕೆ ಪ್ರಸಾದಿಯಾದ ಆ ಅಧ್ಯಾತ್ಮನ ಭಾವಕೆ ಪ್ರಾಣಲಿಂಗಿಯಾದ. ಆ ಜ್ಞಾನಾತ್ಮನ ಭಾವಕೆ ಶರಣನಾದ. ಆ ಚಿದಾತ್ಮನ ಭಾವಕೆ ಐಕ್ಯನಾದ. ಆ ಐಕ್ಯನ ಕರಕಮಲಕೆ ಮಹಾಲಿಂಗನಾದ. ಆ ಶರಣನ ಕರಕಮಲಕೆ ಪ್ರಸಾದಲಿಂಗನಾದ. ಆ ಪ್ರಾಣಲಿಂಗಿಯ ಕರಕಮಲಕೆ ಜಂಗಮಲಿಂಗನಾದ. ಆ ಪ್ರಸಾದಿಯ ಕರಕಮಲಕೆ ಶಿವಲಿಂಗನಾದ. ಆ ಮಹೇಶ್ವರನ ಕರಕಮಲಕೆ ಗುರುಲಿಂಗನಾದ. ಆ ಭಕ್ತನ ಕರಕಮಲಕೆ ಆಚಾರಲಿಂಗನಾದ. ಆ ಆಚಾರಲಿಂಗಕೆ ಕ್ರಿಯಾಶಕ್ತಿ, ಆ ಗುರುಲಿಂಗಕೆ ಜ್ಞಾನಶಕ್ತಿ, ಆ ಶಿವಲಿಂಗಕೆ ಇಚ್ಫಾಶಕ್ತಿ, ಆ ಜಂಗಮಲಿಂಗಕೆ ಆದಿಶಕ್ತಿ, ಆ ಪ್ರಸಾದಲಿಂಗಕೆ ಪರಾಶಕ್ತಿ, ಆ ಮಹಾಲಿಂಗಕೆ ಚಿಚ್ಭಕ್ತಿ. ಆ ಚಿಚ್ಫಕ್ತಿಸಂಗದಿಂದ ಚಿದ್ಬ್ರಹ್ಮವ ಕೂಡಿ ಚಿದಾನಂದಸ್ವರೂಪವಾದನಯ್ಯ ಝೇಂಕಾರ ನಿಜಲಿಂಗಪ್ರಭುವೆ.