Index   ವಚನ - 84    Search  
 
ತನ್ನಿಂದ ತಾನಾದವನು, ಉನ್ಮನಿಯ ಬಾಗಿಲ ಮುಂದೆ ನಿಂದು ಬತ್ತಲೆಯಾದ ಭಾಮಿನಿಯ ಕರೆದು, ಮಹಾಜ್ಞಾನವೆಂಬ ಹಸ್ತದಿಂದ ಹವಳ ನೀಲ ರತ್ನ ಪಚ್ಚೆ ಮುತ್ತು ಮಾಣಿಕ್ಯದ ಗದ್ದುಗೆಯ ಮೇಲೆ ಮಹಾಲಿಂಗವೆಂಬ ಮೂರ್ತಿಯ ನೆಲೆಯಂಗೊಳಿಸಿ ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾ ಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿರ್ದ್ವಂದ್ವವೆಂಬ ಧೂಪವ ತೋರಿ, ಭಕ್ತನೆಂಬ ಅಡ್ಡಣಿಗೆಯ ಮೇಲೆ, ಮಹೇಶ್ವರನೆಂಬ ಹರಿವಾಣವನಿಕ್ಕಿ, ಮಹಾಪ್ರಸಾದವ ನೆಲೆಯಂಗೊಂಡು ಪ್ರಾಣಲಿಂಗಿಯೆಂಬ ತುಪ್ಪವನೆರೆದು ಶರಣನೆಂಬ ಸಕ್ಕರೆಯ ತಳೆದು ಆ ಲಿಂಗಕ್ಕೆ ತೃಪ್ತಿಯನೆಯ್ದಿಸುತಿರ್ಪಳು ನೋಡಾ! ನವರತ್ನದ ಹರಿವಾಣದೊಳಗೆ ಸಪ್ತದ್ವೀಪಂಗಳ ರಚಿಸಿ ಓಂ ನಮೋ ಓಂ ನಮೋ, ಓಂ ನಮೋ ಶಿವಾಯಯೆಂದು ಬೆಳಗುತಿಪ್ಪಳು ನೋಡಾ. ಝೇಂಕಾರ ನಿಜಲಿಂಗಪ್ರಭುವೆ.