Index   ವಚನ - 190    Search  
 
ಮಹಾಮೇರುವೆಂಬ ಪಟ್ಟಣದರಸಂಗೆ ಮೂರು ಪ್ರಧಾನಿಗಳು, ಆರು ಮಂದಿ ವಜೀರರು, ಮೂವತ್ತಾರು ಮಂದಿ ಸರದಾರರು, ಐವತ್ತೆರಡು ಮಂದಿ ಮಹಾಲದಾರರು ಕೂಡಿ ಕತ್ತಲ ಕಾಳಂಧವೆಂಬ ದೇಶವನು ಕಾಳಗವ ಮಾಡಿ ತಕ್ಕೊಂಬುವುದ ಕಂಡೆನಯ್ಯ. ಅದು ಹೇಗೆಂದಡೆ: ಹತ್ತುಲಕ್ಷ ರಾವುತರ ಹಿಡಿದು, ಎಂಟು ಸಾವಿರ ಕುದುರೆಗಳ ಹಿಡಿದು, ಅರವತ್ತು ಕೋಟಿ ಕಾಲಮಂದಿಯ ಸಂದಿಸಂದಿನಲ್ಲಿ ನಿಲಿಸಿ, ಸಪ್ತೇಳುಸಾಗರವ ದಾಂಟಿ, ಕತ್ತಲಕಾಳಂಧವೆಂಬ ದೇಶವನು, ಕೈಸೆರೆಯ ಮಾಡಿಕೊಂಡು, ಐದು ಠಾಣ್ಯವ ಬಲಿದು, ಕಡೆಯ ಠಾಣ್ಯದ ಮುಂದೆ ಚಾವಡಿಯ ರಚಿಸುವುದ ಕಂಡೆನಯ್ಯ. ಅದು ಹೇಗೆಂದಡೆ: ಅದಕೆ ಕಂಬ ಒಂದು, ತೊಲೆ ಮೂರು, ಆರು ಜಂತಿಗಳು, ಮೂವತ್ತಾರು ನೆಲೆಗಳ ಹೂಡಿ. ಒಂಬತ್ತು ಬಾಗಿಲಲ್ಲಿ ನವ ಬೊಂಬೆಗಳ ನಿಲಿಸಿ, ಅವಕ್ಕೆ ನವರತ್ನವ ಕೆತ್ತಿಸಿ, ಐದು ತೊಂಡಲಂಗಳ ಕಟ್ಟಿ, ಹವಳ ನೀಲ ರತ್ನ ಧವಳ ಮುತ್ತು ಮಾಣಿಕ್ಯದ ಗದ್ದುಗೆಯ ಮೇಲೆ ಆ ಅರಸನ ಮೂರ್ತಂಗೊಳಿಸಿ, ಸಪ್ತದ್ವೀಪಂಗಳಂ ರಚಿಸಿ, ಸೋಮವೀದಿ ಸೂರ್ಯವೀದಿಯ ಶೃಂಗಾರವ ಮಾಡಿ, ಆ ಅರಸಿಂಗೆ ಒಡ್ಡೋಲಗವಂ ಮಾಡುವುದ ಕಂಡೆನಯ್ಯ. ಅದು ಹೇಗೆಂದಡೆ: ಪಾತಾಳಲೋಕವೆಂಬ ಠಾಣ್ಯದಲ್ಲಿ ತಾಳ, ಕಂಸಾಳ, ಘಂಟೆ, ಜಾಗಟೆ ಮೊದಲಾದ ಶಬ್ದಂಗಳು, ಮರ್ತ್ಯಲೋಕವೆಂಬ ಠಾಣ್ಯದಲ್ಲಿ ಕಿನ್ನರವೇಣು ತಂಬೂರವೇಣು ಕೈಲಾಸವೇಣುಗಳು ಮೊದಲಾದ ಶಬ್ದಗಳು, ಸ್ವರ್ಗಲೋಕವೆಂಬ ಠಾಣ್ಯದಲ್ಲಿ ಭೇರಿ ಡಮರು ತುಡುಮೆ ಡಿಂಡಿಮ ಮೊದಲಾದ ಶಬ್ದಂಗಳು, ತತ್ಪುರುಷವೆಂಬ ಲೋಕದಲ್ಲಿ, ಕೊಳಲು ನಾಗಸ್ವರ ಶಂಖ ಸನಾಯ ಬುರುಗು ನಪಿರಿ ಹೆಗ್ಗಾಳೆ ಚಿನಿಗಾಳೆ ಚಂದ್ರಗಾಳೆ ಮೊದಲಾದ ಶಬ್ದಂಗಳು, ಈಶಾನ್ಯಲೋಕವೆಂಬ ಠಾಣ್ಯದಲ್ಲಿ ಗೀತಪ್ರಬಂಧ ರಾಗಭೇದ ಮೊದಲಾದ ಶಬ್ದಂಗಳು, ಇಂತಿವು ಆ ಅರಸಿಂಗೆ ಒಡ್ಡೋಲಗವ ಮಾಡುವುದ ಕಂಡೆನಯ್ಯ. ಬ್ರಹ್ಮಂಗೆ ತಾಳ, ವಿಷ್ಣುವಿಂಗೆ ವೇಣು, ರುದ್ರಂಗೆ ಮೃದಂಗ, ಈಶ್ವರಂಗೆ ಉಪಾಂಗ, ಸದಾಶಿವಂಗೆ ಗಾಯನ- ಇಂತೀ ಐವರು ಆ ಅರಸಿಂಗೆ ಗಂಧರ್ವರಾಗಿರ್ಪರು ನೋಡಾ. ಆದಿಶಕ್ತಿ ಮಂತ್ರಶಕ್ತಿ ಕ್ರಿಯಾಶಕ್ತಿ ಇಚ್ಫಾಶಕ್ತಿ ಜ್ಞಾನಶಕ್ತಿ ಇಂತೈವರು ನಾಂಟ್ಯವನಾಡುತಿರ್ಪರು ನೋಡಾ. ಒಬ್ಬ ಸತಿಯಳು ಆ ಅರಸಿಂಗೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿರ್ಧ್ವಂದ್ವವೆಂಬ ಧೂಪವ ತೋರಿ, ಭಕ್ತನೆಂಬ ಅಡ್ಡಣಿಗೆಯ ಮೇಲೆ, ಮಹೇಶ್ವರನೆಂಬ ಹರಿವಾಣವನಿಕ್ಕಿ, ಮಹಾಪ್ರಸಾದವ ನೆಲೆಯಂಗೊಂಡು, ಪ್ರಾಣಲಿಂಗಿಯೆಂಬ ತುಪ್ಪವನೆರೆದು, ಶರಣನೆಂಬ ಸಕ್ಕರೆಯ ತಳೆದು, ಆ ಅರಸಿಂಗೆ ನೈವೇದ್ಯವ ಮಾಡುತಿರ್ಪಳು ನೋಡಾ. ನವರತ್ನದ ಹರಿವಾಣದೊಳಗೆ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ ಪಂಚದೀಪಂಗಳ ರಚಿಸಿ, ಆ ಅರಸಿಂಗೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.