Index   ವಚನ - 191    Search  
 
ನಾನು ಇಲ್ಲದಂದು, ನೀನು ಇಲ್ಲದಂದು, ತಾನುತಾನೆಂಬುದು ನೆನಪಿಂಗೆ ಬಾರದಂದಿಗೆ ಒಬ್ಬ ಮೂರ್ತಿ ಓಂ ಎಂಬ ದಾರಿ ಹಿಡಿದು ಬಂದು ಸದಾಶಿವನೆಂಬ ಕಳ್ಳನ ನಿಟಿಲಮುಂದಳ ಚಾವಡಿಯಲ್ಲಿ ಹಿಡಿದು ಲಿಂಗಧ್ಯಾನವ ಮಾಡುತಿರ್ಪನು ನೋಡಾ! ಪಶ್ಚಿಮದಿಶೆಯಲ್ಲಿ ನಿರಂಜನಗಣೇಶ್ವರ ನಿಂದು, ಒಳಹೊರಗೆ ಪರಿಪೂರ್ಣವಾಗಿ, ಕಿರಣವ ಸೂಸುತಿರ್ಪನು ನೋಡಾ! ಆ ಕಿರಣದ ಸುಳುವಿನ ಭೇದವನರಿತು ಸಪ್ತೇಳು ಸಾಗರವ ದಾಂಟಿ ಅಷ್ಟಕುಲಪರ್ವತವ ಮೆಟ್ಟಿ ಒಂಬತ್ತು ಬಾಗಿಲ ದೇಗುಲವ ಸುತ್ತಿ, ಕಡೆಯ ಬಾಗಿಲಲ್ಲಿ ನಿಂದು, ತನ್ನ ಮನವ ತಾನೇ ನುಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.