ನಾನು ಇಲ್ಲದಂದು, ನೀನು ಇಲ್ಲದಂದು,
ತಾನುತಾನೆಂಬುದು ನೆನಪಿಂಗೆ ಬಾರದಂದಿಗೆ
ಒಬ್ಬ ಮೂರ್ತಿ ಓಂ ಎಂಬ ದಾರಿ ಹಿಡಿದು ಬಂದು
ಸದಾಶಿವನೆಂಬ ಕಳ್ಳನ ನಿಟಿಲಮುಂದಳ ಚಾವಡಿಯಲ್ಲಿ ಹಿಡಿದು
ಲಿಂಗಧ್ಯಾನವ ಮಾಡುತಿರ್ಪನು ನೋಡಾ!
ಪಶ್ಚಿಮದಿಶೆಯಲ್ಲಿ ನಿರಂಜನಗಣೇಶ್ವರ ನಿಂದು,
ಒಳಹೊರಗೆ ಪರಿಪೂರ್ಣವಾಗಿ,
ಕಿರಣವ ಸೂಸುತಿರ್ಪನು ನೋಡಾ!
ಆ ಕಿರಣದ ಸುಳುವಿನ ಭೇದವನರಿತು
ಸಪ್ತೇಳು ಸಾಗರವ ದಾಂಟಿ ಅಷ್ಟಕುಲಪರ್ವತವ ಮೆಟ್ಟಿ
ಒಂಬತ್ತು ಬಾಗಿಲ ದೇಗುಲವ ಸುತ್ತಿ, ಕಡೆಯ ಬಾಗಿಲಲ್ಲಿ ನಿಂದು,
ತನ್ನ ಮನವ ತಾನೇ ನುಂಗಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.