ಪ್ರಣವಪಂಚಾಕ್ಷರಿಯೆಂಬ ಕೊನೆಯ ಮೇಲೆ
ಅಣಿಮಾಯಾಲಿಂಗವು ಸರ್ವ ಬ್ರಹ್ಮಾಂಡವ ಗರ್ಭಿಕರಿಸಿಕೊಂಡು
ತನ್ನ ನಿಜವ ತಾನೇ ತೋರುತ್ತಿತ್ತು ನೋಡಾ!
ಆ ನಿಜವ ಈ ಲೋಕದವರು ಆರಾದಡೆಯು ಅರಿಯಬಲ್ಲರೇನಯ್ಯ?
ಬ್ರಹ್ಮ ವಿಷ್ಣು ರುದ್ರಾದಿಗಳಿಗೆ ಅಗೋಚರವೆನಿಸಿತ್ತು ನೋಡಾ.
ಇದು ಕಾರಣ ಅಂಗಕರಣವನಳಿದು ಲಿಂಗಕಿರಣವಾದ ಶರಣನು
ಆ ನೆನವನರಿಯಬಲ್ಲನಯ್ಯ; ಸರ್ವ ಬ್ರಹ್ಮಾಂಡವ ನೋಡಬಲ್ಲನಯ್ಯ;
ಅಣಿಮಾಯಾಲಿಂಗವ ಕೂಡಬಲ್ಲನಯ್ಯ,
ಝೇಂಕಾರ ನಿಜಲಿಂಗಪ್ರಭುವೆ, ನಿಮ್ಮ ಶಿವಶರಣನು.