Index   ವಚನ - 277    Search  
 
ಸಕಲ ನಿಃಕಲಗಳು ಇಲ್ಲದಂದು, ಪರಾಪರಗಳಿಲ್ಲದಂದು, ಇವೇನೇನೂ ಇಲ್ಲದಂದು ಅತ್ತತ್ತಲೇ. ಅಪರಂಪರ ಮಹಾಮಹಿಮ ನಿಷ್ಕಲಶಿವತತ್ವ ತಾನೊಂದೆ ನೋಡಾ. ಆ ನಿಷ್ಕಲಶಿವತತ್ವದಿಂದ ಜ್ಞಾನಚಿತ್ತು ಉದಯಿಸಿತ್ತು ನೋಡಾ. ಆ ಜ್ಞಾನಚಿತ್ತುವಿನಿಂದ ಚಿನ್ನಾದ ಚಿದ್ಬಿಂದು ಚಿತ್ಕಳೆ ಚಿತ್ಪ್ರಕಾಶ ಚಿಚ್ಫಕ್ತಿಯೆ ಆದಿಯಾಗಿ ಓಂಕಾರವೆಂಬ ಪ್ರಣವವಾಯಿತ್ತು ನೋಡಾ. ಆ ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರವೆಂದು ಮೂರು ತೆರನಾಯಿತ್ತು. ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಅಕಾರವೆ ನಕಾರ ಮಕಾರವೆಂದು ಎರಡುತೆರನಾಯಿತ್ತು. ಉಕಾರವೆ ಶಿಕಾರ ವಕಾರವೆಂದು ಎರಡುತೆರನಾಯಿತ್ತು. ಮಕಾರವೆ ಯಕಾರ ಓಂಕಾರವೆಂದು ಎರಡುತೆರನಾಯಿತ್ತು. ಇಂತಪ್ಪ ಓಂಕಾರವೆಂಬ ಪ್ರಣವದಲ್ಲಿ ನಾದ ಬಿಂದು ಕಳೆಯೆಂದು ಮೂರುತೆರನಾಯಿತ್ತು. ಅದು ಹೇಗೆಂದಡೆ : ನಾದವೇ ಕರ್ಮಸಾದಾಖ್ಯ, ಕರ್ತೃಸಾದಾಖ್ಯವೆಂದು ಎರಡುತೆರನಾಯಿತ್ತು. ಬಿಂದುವೇ ಮೂರ್ತಿಸಾದಾಖ್ಯ ಅಮೂರ್ತಿಸಾದಾಖ್ಯವೆಂದು ಎರಡುತೆರನಾಯಿತ್ತು. ಕಳೆಯೇ ಶಿವಸಾದಾಖ್ಯ ಮಹಾಸಾದಾಖ್ಯವೆಂದು ಎರಡುತೆರನಾಯಿತ್ತು. ಇಂತಪ್ಪ ಓಂಕಾರವೆಂಬ ಪ್ರಣವದಲ್ಲಿ ಗುರು-ಲಿಂಗ-ಜಂಗಮವೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಗುರುವೇ ಭಕ್ತ-ಮಹೇಶ್ವರನೆಂದು ಎರಡುತೆರನಾಯಿತ್ತು. ಲಿಂಗವೇ ಪ್ರಸಾದಿ-ಪ್ರಾಣಲಿಂಗಿಯೆಂದು ಎರಡುತೆರನಾಯಿತ್ತು. ಜಂಗಮವೇ ಶರಣ-ಐಕ್ಯನೆಂದು ಎರಡುತೆರನಾಯಿತ್ತು. ಇಂತಪ್ಪ ಓಂಕಾರವೆಂಬ ಪ್ರಣವದಲ್ಲಿ ಇಷ್ಟ ಪ್ರಾಣ ಭಾವವೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಇಷ್ಟಲಿಂಗವೇ ಆಚಾರಲಿಂಗ-ಗುರುಲಿಂಗವೆಂದು ಎರಡುತೆರನಾಯಿತ್ತು. ಪ್ರಾಣಲಿಂಗವೇ ಶಿವಲಿಂಗ-ಜಂಗಮಲಿಂಗವೆಂದು ಎರಡುತೆರನಾಯಿತ್ತು. ಭಾವಲಿಂಗವೇ ಪ್ರಸಾದಲಿಂಗ-ಮಹಾಲಿಂಗವೆಂದು ಎರಡುತೆರನಾಯಿತ್ತು. ಇಂತಪ್ಪ ಓಂಕಾರವೆಂಬ ಪ್ರಣವದಲ್ಲಿ ಧ್ಯಾನ-ಧಾರಣ-ಸಮಾಧಿಯೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಧ್ಯಾನವೇ ಕ್ರಿಯಾಶಕ್ತಿ-ಜ್ಞಾನಶಕ್ತಿಯೆಂದು ಎರಡುತೆರನಾಯಿತ್ತು. ಧಾರಣವೇ ಇಚ್ಫಾಶಕ್ತಿ-ಆದಿಶಕ್ತಿಯೆಂದು ಎರಡುತೆರನಾಯಿತ್ತು. ಸಮಾಧಿಯೆ ಪರಾಶಕ್ತಿ-ಚಿತ್ ಶಕ್ತಿಯೆಂದು ಎರಡುತೆರನಾಯಿತ್ತು. ಸ್ಥೂಲ-ಸೂಕ್ಷ್ಮ-ಕಾರಣವೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದೂ ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಸ್ಥೂಲವೇ ಸದ್ಭಕ್ತಿ-ನೈಷ್ಠಿಕಭಕ್ತಿ ಎಂದು ಎರಡುತೆರನಾಯಿತ್ತು. ಸೂಕ್ಷ್ಮವೇ ಸಾವಧಾನಭಕ್ತಿ-ಅನುಭಾವಭಕ್ತಿಯೆಂದು ಎರಡುತೆರನಾಯಿತ್ತು. ಕಾರಣವೇ ಅನುಪಮಭಕ್ತಿ-ಸಮರಸಭಕ್ತಿಯೆಂದು ಎರಡುತೆರನಾಯಿತ್ತು. ಇಂತಪ್ಪ ಓಂಕಾರವೆಂಬ ಪ್ರಣವದಲ್ಲಿ ಜಾಗ್ರ-ಸ್ವಪ್ನ-ಸುಷುಪ್ತಿಯೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಜಾಗ್ರವೇ ನಿವೃತ್ತಿಕಲೆ-ಪ್ರತಿಷ್ಠಾಕಲೆಯೆಂದು ಎರಡುತೆರನಾಯಿತ್ತು. ಸ್ವಪ್ನವೇ ವಿದ್ಯಾಕಲೆ-ಶಾಂತಿಕಲೆಯೆಂದು ಎರಡುತೆರನಾಯಿತ್ತು. ಸುಷುಪ್ತಿಯೇ ಶಾಂತ್ಯತೀತಕಲೆ-ಶಾಂತ್ಯಾತೀತೋತ್ತರಕಲೆಯೆಂದು ಎರಡುತೆರನಾಯಿತ್ತು. ಇಂತಪ್ಪ ಓಂಕಾರವೆಂಬ ಪ್ರಣವದಲ್ಲಿ ಸಕಲ ತತ್ವಂಗಳನಂಗೀಕರಿಸಿಕೊಂಡು ಅಖಂಡಪರಿಪೂರ್ಣಗೋಳಕಾಕಾರ ತೇಜೋಮಯವಪ್ಪುದು ಮಹಾಲಿಂಗ ತಾನೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.