Index   ವಚನ - 435    Search  
 
ಈ ಧರೆಯ ಮೇಲೆ ಭಕ್ತರೆಂದು ಗುರು ಲಿಂಗ ಜಂಗಮಕ್ಕೆ ನಡೆವರಯ್ಯ. ಬಹಿರಂಗದ ಬಳಕೆಯನಳಿದು ಶಬ್ದಮುಗ್ಧನಾದರೆ, ಗುರುವೆಂಬೆನಯ್ಯ. ಭ್ರಾಂತಿಸೂತಕವನಳಿದು ನಿಭ್ರಾಂತನಾದರೆ, ಲಿಂಗವೆಂದೆಂಬೆನಯ್ಯ. ವಿಷಯವ್ಯಸನಗಳನಳಿದು ಶುದ್ಧ ಸಿದ್ಧ ಪ್ರಸಿದ್ಧವಾದರೆ, ಜಂಗಮವೆಂದೆಂಬೆನಯ್ಯ. ಇಂತೀ ಗುರು ಲಿಂಗ ಜಂಗಮವನರಿತು ಆ ಗುರು ಲಿಂಗ ಜಂಗಮಕ್ಕೆ ನಡೆಯಬಲ್ಲಾತನೆ ನಿರ್ಮಲಸ್ವರೂಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.