Index   ವಚನ - 436    Search  
 
ಈ ಲೋಕದೊಳಗೆ ಶೀಲವಂತರೆಂದು ಪಾದೋದಕ ಪ್ರಸಾದವ ಕೊಂಬರಯ್ಯ. ಬ್ರಹ್ಮನನಳಿದು ಭಕ್ತನಾಗಿ ಆಚಾರಲಿಂಗವ ನೆಲೆಯಂಗೊಂಡರೆ ಪಾದಪೂಜೆಯೆಂದೆಂಬೆನಯ್ಯ. ವಿಷ್ಣುವನಳಿದು ಮಹೇಶ್ವರನಾಗಿ ಗುರುಲಿಂಗವ ನೆಲೆಯಂಗೊಂಡರೆ ಪಾದೋದಕವೆಂದೆಂಬೆನಯ್ಯ. ರುದ್ರನನಳಿದು ಪ್ರಸಾದಿಯಾಗಿ ಶಿವಲಿಂಗವ ನೆಲೆಯಂಗೊಂಡರೆ ಮಹಾಪ್ರಸಾದಿಯೆಂದೆಂಬೆನಯ್ಯ. ಇಂತೀ ಪಾದೋದಕ ಪ್ರಸಾದವನರಿತು, ಆ ಪಾದೋದಕ ಪ್ರಸಾದವ ಕೊಳ್ಳಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.