ಕರ್ಮವೆಂಬ ಕತ್ತಲೆಯಲ್ಲಿ ವರ್ಮಗೆಟ್ಟು
ಮೂವರು ಬಿದ್ದಿರ್ಪರು ನೋಡಾ.
ಅವರಿಂಗೆ ಐವರು ಹೆಂಡರು, ಏಳು ಮಂದಿ ಮಕ್ಕಳು,
ಎಂಟು ಮಂದಿ ನೆಂಟರು,
ಹತ್ತು ಮಂದಿ ಬಾಂಧವರು ಇಪ್ಪರು ನೋಡಾ.
ಒಬ್ಬ ಸತಿಯಳು ಅಂಗಡಿ ಬೀದಿಯನಿಕ್ಕಿ,
ಭವಭಾರಂಗಳ ಮಾರುತಿಪ್ಪಳು ನೋಡಾ.
ಇದು ಕಾರಣ, ಮೇಲಣ ದೇಶದಿಂದ
ನಿರಂಜನ ಗಣೇಶ್ವರ ಬಂದು,
ಅಂಗಡಿ ಬೀದಿಯ ಕೆಡಿಸಿ, ಕರ್ಮವೆಂಬ ಕತ್ತಲೆಯ ಹರಿದು,
ಪ್ರಾಣಲಿಂಗಸಂಬಂಧಿಯಾಗಿ, ಆತ್ಮನಿರಾತ್ಮನೆಂಬ
ಬೆಳಗಿನೊಳು ನಿಂದು
ಪರಕೆಪರವ ತೋರುತಿಪ್ಪನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.