ಪೃಥ್ವಿ-ಅಪ್ಪು-ತೇಜ-ವಾಯು-ಆಕಾಶವಿಲ್ಲದಂದು,
ರವಿ-ಶಶಿ-ಆತ್ಮರಿಲ್ಲದಂದು, ನಾದ-ಬಿಂದು-ಕಲೆಗಳಿಲ್ಲದಂದು,
ಸಾಕ್ಷಿ-ಸಭೆಗಳಿಲ್ಲದಂದು, ಶೂನ್ಯ-ನಿಃಶೂನ್ಯವಿಲ್ಲದಂದು,
ಏನೇನೂ ಇಲ್ಲದಂದು ಅತ್ತತ್ತಲೆ,
ಅಪರಂಪರ ನಿರಾಳ ತಾನೇ ನೋಡಾ.
ಆ ನಿರಾಳನ ಚಿದ್ವಿಲಾಸದಿಂದ ಪರಬ್ರಹ್ಮನಾದನಯ್ಯ.
ಆ ಪರಬ್ರಹ್ಮನ ಭಾವದಿಂದ ಪರಶಿವನಾದ.
ಆ ಪರಶಿವನ ಭಾವದಿಂದ ಸದಾಶಿವನಾದ.
ಆ ಸದಾಶಿವನ ಭಾವದಿಂದ ಈಶ್ವರನಾದ.
ಆ ಈಶ್ವರನ ಭಾವದಿಂದ ರುದ್ರನಾದ.
ಆ ರುದ್ರನ ಭಾವದಿಂದ ವಿಷ್ಣುವಾದ.
ಆ ವಿಷ್ಣುವಿನ ಭಾವದಿಂದ ಬ್ರಹ್ಮನಾದ.
ಆ ಬ್ರಹ್ಮಂಗೆ ಸರಸ್ವತಿಯ ಸಂಬಂಧಿಸಿ ಧಾರೆಯನೆರೆದರು.
ವಿಷ್ಣುವಿಂಗೆ ಲಕ್ಷ್ಮಿಯ ಸಂಬಂಧಿಸಿ ಧಾರೆಯನೆರೆದರು.
ರುದ್ರಂಗೆ ಕ್ರಿಯಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು.
ಈಶ್ವರಂಗೆ ಇಚ್ಫಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು.
ಸದಾಶಿವಂಗೆ ಜ್ಞಾನಶಕ್ತಿಯ ಸಂಬಂಧಿಸಿ ಧಾರೆಯನೆರೆದರು.
ಪರಶಿವಂಗೆ ಪರಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು.
ಪರಬ್ರಹ್ಮಕೆ ಚಿತ್ ಶಕ್ತಿಯ ಸಂಬಂಧಿಸಿ ಧಾರೆಯನೆರೆದರು.
ಇಂತೀ ಭೇದವನರಿತು ಇರಬಲ್ಲರೆ
ಅವರೇ ಪ್ರಾಣಲಿಂಗಸಂಬಂಧಿಗಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.