ಹೃದಯದಲ್ಲಿಪ್ಪ ಪ್ರಾಣಲಿಂಗವನು ತ್ರಿಕೂಟದಲ್ಲಿ ತಂದು,
ಆ ತ್ರಿಕೂಟದಲ್ಲಿಪ್ಪ ಆತ್ಮಲಿಂಗವನು ಬ್ರಹ್ಮರಂಧ್ರದಲ್ಲಿ ತಂದು,
ಆ ಬ್ರಹ್ಮರಂಧ್ರದಲ್ಲಿಪ್ಪ ಮಹಾಜ್ಞಾನವನು ಶಿಖಾಚಕ್ರದಲ್ಲಿ ತಂದು,
ಆ ಶಿಖಾಚಕ್ರದಲ್ಲಿಪ್ಪ ಸ್ವಯಜ್ಞಾನವನು ಪಶ್ಚಿಮಚಕ್ರಕ್ಕೆ ತಂದು,
ಆ ಪಶ್ಚಿಮಚಕ್ರದಲ್ಲಿಪ್ಪ ನಿರಂಜನವ ಅಣುಚಕ್ರಕ್ಕೆ ತಂದು,
ಆ ಅಣುಚಕ್ರದಲ್ಲಿಪ್ಪ ಝೇಂಕಾರಲಿಂಗವನು
ನಿಶ್ಚಿಂತ ನಿರಾಳದಲ್ಲಿ ತಂದು
ತಾನು ತಾನಾಗಿರ್ಪ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.