Index   ವಚನ - 233    Search  
 
ಇನ್ನು ಆ ಆದಿ ಮಕಾರಪ್ರಣವ, ಆದಿ ಅಕಾರಪ್ರಣವ, ಆದಿ ಉಕಾರಪ್ರಣವ-ಈ ಮೂರೂ ಪ್ರಣವಂಗಳು ಬೀಜಸಂಯುಕ್ತವಾಗಿ ಅಖಂಡ ಮಹದೋಂಕಾರವಾಯಿತ್ತು. ಅದೆಂತೆಂದಡೆ: ಆ ಆದಿ ಮಕಾರಪ್ರಣವ, ಆದಿ ಅಕಾರಪ್ರಣವ, ಆದಿ ಉಕಾರಪ್ರಣವ-ಈ ಮೂರೂ ಪ್ರಣವಂಗಳು ಬೀಜಾಕ್ಷರ. ಆದಿ ಮಕಾರವೇ ಆದಿ ಕಲಾಪ್ರಣವ, ಆದಿ ಅಕಾರವೆ ಆದಿ ನಾದಪ್ರಣವ. ಆದಿ ಉಕಾರವೆ ಆದಿ ಬಿಂದುಪ್ರಣವ. ಆದಿ ಮಕಾರಪ್ರಣವವೇ ಸರ್ವಾತ್ಮನು. ಆದಿ ಅಕಾರಪ್ರಣವವೇ ಪರಮಾತ್ಮನು. ಆದಿ ಉಕಾರಪ್ರಣವವೇ ಶಿವಾತ್ಮನು. ಇದಕ್ಕೆ ಮಹಾದೇವ ಉವಾಚ: ಅಕಾರಂ ಪರಮಾತ್ಮಾ ಚ ಉಕಾರಃ ಶಿವಾತ್ಮಾ ಭವೇತ್ | ಮಕಾರಂ ಸರ್ವಾತ್ಮಾ ಚ ಇತಿ ಭೇದಂ ವರಾನನೇ ||'' ಇಂತೆಂದುದಾಗಿ, ಆದಿ ಮಕಾರಕ್ಕೆ ಆದಿ ಕಲಾಪ್ರಣವವೆ ಆಧಾರ. ಆದಿ ಅಕಾರಕ್ಕೆ ಆದಿ ನಾದಪ್ರಣವವೆ ಆಧಾರ. ಆದಿ ಉಕಾರಕ್ಕೆ ಆದಿ ಬಿಂದುಪ್ರಣವವೆ ಆಧಾರ. ಆದಿ ಪ್ರಾಣಮಾತ್ರೆಯಪ್ರಣವಕ್ಕೆ ಅಖಂಡ ಜ್ಯೋತಿರ್ಮಯಲಿಂಗವೆ ಆಧಾರ. ಆದಿ ಮ ಎಂದರೆ ಆದಿ ಕಲಾಪ್ರಣವ. ಆದಿ ಅ ಎಂದರೆ ಆದಿ ನಾದಪ್ರಣವ. ಆದಿ ಉ ಎಂಬ ಆದಿ ಬಿಂದುಪ್ರಣವದಲ್ಲಿ ಬಿಂದು ಸಂಯುಕ್ತವಾಗಿ, ಆದಿ `ಮ' ಎಂಬ ಆದಿ ಮ ನ ಸ ರ ಪ್ರಣವದಲ್ಲಿ ಬಂದು ಕೂಡಲು ಮಹದೋಂಕಾರವಾಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.