ಮತ್ತಂ, ಆ ಶಿಷ್ಯನು ಶ್ರೀ ಗುರುವೆ ಶರಣು,
ಸರ್ವಚೈತನ್ಯಾತ್ಮಗುರುವೆ ಶರಣು,
ನಿತ್ಯನಿರಂಜನಗುರುವೆ ಶರಣು, ಶಾಂತ ಉಪಶಾಂತಗುರುವೇ ಶರಣು,
ವ್ಯೋಮಾತೀತಗುರುವೆ ಶರಣು,
ನಾದ ಬಿಂದು ಕಲಾತೀತಗುರುವೆ ಶರಣು,
ನಿಮ್ಮ ಭವರೋಗವೈದ್ಯನೆಂದು ಶ್ರುತಿಗಳು ಸಾರುತಿರಲು
ನಾನು ಭವರೋಗಿ ಬಂದು ನಿಮ್ಮ ಮೊರೆಹೊಕ್ಕೆನು,
ಎನ್ನ ಭವರೋಗಂಗಳ ಕಳೆದು
ನಿಮ್ಮ ಕರುಣಪ್ರಸಾದವನಿಕ್ಕಿ ಸಲಹಯ್ಯ
ಅಪ್ರಮಾಣಕೂಡಲಸಂಗಮದೇವಾ.