Index   ವಚನ - 328    Search  
 
ಇನ್ನು ಗುರುಕರುಣಸ್ಥಲವದೆಂತೆಂದಡೆ: ನಾನಾ ಭವದಲ್ಲಿ ಬಂದ ಭವಿಯಂ ಕಳದು ಭಕ್ತನ ಮಾಡಿದ ಕ್ರಮವೆಂತೆಂದಡೆ; `ಅಗ್ನಿರಿತಿ ಭಸ್ಮ ವಾಯುರಿತಿ ಭಸ್ಮ'ವೆಂಬ ವಿಭೂತಿಯಿಲ್ಲದಂದು. `ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ'ವೆಂಬ ವಿಭೂತಿಯಿಲ್ಲದಂದು. `ವ್ಯೋಮೇತಿ ಭಸ್ಮ ಸೋಮೇತಿ ಭಸ್ಮ'ವೆಂಬ ವಿಭೂತಿಯಿಲ್ಲದಂದು. `ಸೂರ್ಯೇತಿ ಭಸ್ಮ ಆತ್ಮೇತಿ ಭಸ್ಮ'ವೆಂಬ ವಿಭೂತಿಯಿಲ್ಲದಂದು. `ಅನಾದಿಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ ಚಿದಂಗಂ ವೃಷಭಾಕಾರಂ' ಆಗಿಹ ಚಿದ್ಭಸ್ಮವ ತಂದು ವಿಭೂತಿಯ ಪಟ್ಟವಂ ಕಟ್ಟಿದರೆ ಭಾವಭ್ರಮೆಯಳಿದು ಭಾವ ಗುರುವಾಯಿತ್ತು. ಕಾಯಗುಣವಳಿದು ಕಾಯ ಲಿಂಗವಾಯಿತ್ತು. ಪ್ರಾಣಗುಣವಳಿದು ಪ್ರಾಣ ಲಿಂಗವಾಯಿತ್ತು. ಮನವಿಕಾರವಳಿದು ಮನ ಲಿಂಗವಾಯಿತ್ತು. ಘ್ರಾಣಕ್ಕೆ ಸುವಾಸನೆಯನರಿವ ಆಚಾರಲಿಂಗವಾಯಿತ್ತು. ಜಿಹ್ವೆಗೆ ಪ್ರಸಾದಭೋಗವನರಿವ ಗುರುಲಿಂಗವಾಯಿತ್ತು. ಶ್ರೋತ್ರಕ್ಕೆ ಷಡಾಕ್ಷರಮಂತ್ರವನರಿವ ಪ್ರಸಾದಲಿಂಗವಾಯಿತ್ತು. ನೋಟಕ್ಕೆ ಘನಚೈತನ್ಯವಾದ ಶಿವಲಿಂಗವಾಯಿತ್ತು. ಶಬ್ದಕ್ಕೆ ಸರ್ವಲಿಂಗಾನುಭಾವಿಯಾಯಿತ್ತು. ಇಂತು ಪೂರ್ವಗುಣವಳಿದು ಪುನರ್ಜಾತನಾದ ಮಹಾಶರಣನು ಸರ್ವಾಂಗಲಿಂಗಿ ನೋಡಾ ಅಪ್ರಮಾಣಕೂಡಲಸಂಗಮದೇವಾ.