Index   ವಚನ - 331    Search  
 
ಕೃತಯುಗದಲ್ಲಿ ಅಖಂಡಾತ್ಮನೆಂಬ ಗಣೇಶ್ವರನಾಗಿದ್ದಂದು, ಸದ್ಗುರುಸ್ವಾಮಿ ತಮ್ಮ ಕೃಪಾಕಟಾಕ್ಷದೃಷ್ಟಿಯಿಂ ನೋಡಿ, ಎನ್ನ ಮಸ್ತಕದಮೇಲೆ ತಮ್ಮ ಹಸ್ತ ಕಮಲವನಿರಿಸಿ ʼಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹʼ ಎಂಬ ಲಿಂಗವ ತೆಗದೆನ್ನ ಕರಸ್ಥಲದಲ್ಲಿ ಪ್ರತಿಷ್ಠೆಯ ಮಾಡಿದನಯ್ಯಾ ಎನ್ನ ಗುರು. ತ್ರೇತಾಯುಗದಲ್ಲಿ ಅಚಲಾತ್ಮನೆಂಬ ಗಣೇಶ್ವರನಾಗಿದ್ದಂದು ಸದ್ಗುರುಸ್ವಾಮಿ ತಮ್ಮ ಕೃಪಾಕಟಾಕ್ಷದೃಷ್ಟಿಯಿಂ ನೋಡಿ, ಎನ್ನ ಮಸ್ತಕದ ಮೇಲೆ ತಮ್ಮ ಹಸ್ತಕಮಲವನಿರಿಸಿ ʼನಿಶ್ಯಬ್ದಂ ಪರಬ್ರಹ್ಮ ಉಚ್ಯತೇʼ ಎಂಬ ನಾದಬಿಂದುಕಲಾತೀತ ಲಿಂಗಮಂ ತೆಗದೆನ್ನ ಕರಸ್ಥಲದಲ್ಲಿ ಪ್ರತಿಷ್ಠೆಯಂ ಮಾಡಿದನಯ್ಯ ಎನ್ನ ಗುರು. ದ್ವಾಪರಯುಗದಲ್ಲಿ ಅಖಂಡಿತನೆಂಬ ಗಣೇಶ್ವರನಾಗಿದ್ದಂದು ಸದ್ಗುರುಸ್ವಾಮಿ ತಮ್ಮ ಕೃಪಾಕಟಾಕ್ಷದೃಷ್ಟಿಯಿಂ ನೋಡಿ, ಎನ್ನ ಮಸ್ತಕದ ಮೇಲೆ ತಮ್ಮ ಹಸ್ತಕಮಲವನಿರಿಸಿ ʼಓಂಕಾರೇಭ್ಯೋ ಜಗತ್ರಾಣ ಜಗತಾಂ ಪತಯೇ ನಮೋ ನಮೋʼ ಎಂಬ ಪ್ರಣವಲಿಂಗವ ತೆಗದೆನ್ನ ಕರಸ್ಥಲದಲ್ಲಿ ಪ್ರತಿಷ್ಠೆಯಂ ಮಾಡಿದನಯ್ಯ ಎನ್ನ ಗುರು. ಆ ಲಿಂಗ ಸ್ವರ್ಶನವ ಮಾಡಲು ಎನ್ನ ಸ್ವರ್ಶನವಳಿದು ಲಿಂಗಸ್ವರ್ಶನವಾಯಿತ್ತು. ಆ ಲಿಂಗವ ನೋಡಲು ಎನ್ನ ನೇತ್ರವಳಿದು ಲಿಂಗನೇತ್ರವಾಯಿತ್ತು. ಆ ಲಿಂಗವ ಸ್ತೋತ್ರವ ಮಾಡಲು ಎನ್ನ ಜಿಹ್ವೆಯಳಿದು ಲಿಂಗಜಿಹ್ವೆಯಾಯಿತ್ತು. ಆ ಲಿಂಗಸ್ತೋತ್ರವ ಕೇಳಲು ಎನ್ನ ಶ್ರೋತ್ರವಳಿದು ಲಿಂಗಶ್ರೋತ್ರವಾಯಿತ್ತು. ಆ ಲಿಂಗಪ್ರಸಾದವ ಘ್ರಾಣಿಸಲು ಎನ್ನ ಘ್ರಾಣವಳಿದು ಲಿಂಗಘ್ರಾಣವಾಯಿತ್ತು. ಆ ಲಿಂಗವ ನೆನನೆನದು ಎನ್ನ ಮನವಳಿದು ಮನವೆಲ್ಲ ಲಿಂಗದ ಮನವಾಯಿತ್ತು. ಎನ್ನ ಸರ್ವಾಂಗವೆಲ್ಲ ಮಹಾಲಿಂಗವಾಯಿತ್ತು. ಇನ್ನು ಮರಳಿ ಮರ್ತ್ಯಲೋಕಕ್ಕೆ ಬಂದೆನಾದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಕಾಣಾ. ಅಪ್ರಮಾಣಕೂಡಲಸಂಗಮದೇವಾ.