Index   ವಚನ - 364    Search  
 
ಇನ್ನು ಲಿಂಗೋದಕ, ಪಾದೋದಕ, ಪ್ರಸಾದೋದಕವೆಂತೆಂದಡೆ: ಲಿಂಗೋದಕ ಶಿವಮಂತ್ರಸಂಸ್ಕಾರದಿಂದಾದುದು. ಲಿಂಗಕ್ಕೆ ಮಜ್ಜನಕ್ಕೆರದುದೇ ಪಾದೋದಕ. ಲಿಂಗವಾರೋಗಣೆಯ ಮಾಡಿ ಮಿಕ್ಕುದೆ ಪ್ರಸಾದೋದಕ. ಲಿಂಗೋದಕದಲ್ಲಿ ಪಾಕಪ್ರಯತ್ನ ಮಜ್ಜನಾದಿಗಳ ಮಾಡುವುದು. ಪಾದೋದಕದಲ್ಲಿ ಮುಖಪ್ರಕ್ಷಾಲನವ ಮಾಡುವುದು; ಮಸ್ತಕದ ಮೇಲೆ ತಳಿದುಕೊಂಬುವುದು, ಪ್ರಸಾದೋದಕವ ಭುಂಜಿಸುವುದು ನೋಡಾ ಅಪ್ರಮಾಣಕೂಡಲಸಂಗಮದೇವಾ.