ಆದಿ ಅಕಾರ ಪ್ರಣವಕ್ಕೆ ಆದಿ ನಾದಪ್ರಣವವೇ ಆಧಾರ.
ಆದಿ ಉಕಾರಪ್ರಣವಕ್ಕೆ ಆದಿ ಬಿಂದುಪ್ರಣವವೇ ಆಧಾರ.
ಆದಿ ಮಕಾರಪ್ರಣವಕ್ಕೆ ಆದಿ ಕಲಾಪ್ರಣವವೇ ಆಧಾರ.
ಆ ಆದಿ ನಾದಬಿಂದುಕಲಾಪ್ರಣವಣಕ್ಕೆ
ಆ ಆದಿ ಪ್ರಕೃತಿಪ್ರಣವವೇ ಆಧಾರ.
ಆ ಆದಿ ಪ್ರಕೃತಿಪ್ರಣವಕ್ಕೆ
ಆ ಆದಿ ಪ್ರಾಣಮಾತ್ರೆಯ ಪ್ರಣವವೇ ಆಧಾರ.
ಆ ಆದಿ ಪ್ರಾಣಮಾತ್ರೆಯ ಪ್ರಣವಕ್ಕೆ
ಆ ಅಖಂಡಜ್ಯೋತಿರ್ಮಯಲಿಂಗವೇ ಆಧಾರ.
ಆದಿ ಅ ಎಂದರೆ ಆದಿ ಅನಾಹತಪ್ರಣವ,
ಆದಿ ಉ ಎಂದರೆ ಆದಿ ನಾದ ಪ್ರಣವವಳಿಯಿತ್ತು.
ಆದಿ ಮ ಎಂಬ ಪ್ರಣವದಲ್ಲಿ ಆದಿ ಬಿಂದುಪ್ರಣವ ಬಂದು ಕೂಡಲು
ಅಖಂಡ ಜ್ಯೋತಿರ್ಮಯವಾಗಿಹ
ಗೋಳಕಾಕಾರಪ್ರಣವವಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.